ಸಂದೇಶ್‌ಖಾಲಿ ಹಿಂಸಾಚಾರ ಪ್ರಕರಣ: 55 ದಿನಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯ ಬಂಧನ…

48
firstsuddi

ಕೋಲ್ಕತ್ತಾ: ಜಾರಿ ನಿರ್ದೇಶನಾಲಯ ಇಲಾಖೆ ಅಧಿಕಾರಿಗಳ ಮೇಲೆ ಹಲ್ಲೆ, ಸಂದೇಶ್‌ಖಾಲಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ, , ತೃಣಮೂಲ ಕಾಂಗ್ರೆಸ್ ಮುಖಂಡ ಶೇಖ್ ಷಹಜಹಾನ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಷಹಜಹಾನ್ ಮತ್ತು ಆತನ ಸಹಚರರು ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಭೂಕಬಳಿಕೆ ಆರೋಪ ಹೊತ್ತಿದ್ದಾರೆ. ಹೀಗಾಗಿ, ಉತ್ತರ 24 ಪರಗಣ ಜಿಲ್ಲೆಯಲ್ಲಿ ಶೇಖ್ ಷಹಜಹಾನ್‌ನನ್ನು ಬಂಗಾಳದ ವಿಶೇಷ ಪೊಲೀಸ್ ತಂಡವು ಮಧ್ಯರಾತ್ರಿ ಬಂಧಿಸಿದೆ.

ಈತ 55 ದಿನಗಳಿಂದ ಪರಾರಿಯಾಗಿದ್ದ. ಬಂಧನದ ನಂತರ ಬಸಿರ್ಹತ್​ಗೆ ಕರೆದುಕೊಂಡು ಹೋಗಿರುವ ಪೊಲೀಸರು, ಶಹಜಹಾನ್ ಶೇಖ್ ನನ್ನು ನ್ಯಾಯಾಲಯದ ಮುಂದೆ ಇಂದು ಹಾಜರುಪಡಿಸಲಿದ್ದಾರೆ. ಬಂಧನಕ್ಕೆ ಮುನ್ನ ಹಲವು ದಿನಗಳಿಂದ ಆತನ ಚಟುವಟಿಕೆಗಳ ಮೇಲೆ ತಂಡ ನಿಗಾ ಇರಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂದೇಶ್‌ಖಾಲಿ ಪ್ರಕರಣದಲ್ಲಿ ಟಿಎಂಸಿ ನಾಯಕ ಹೆಸರನ್ನೂ ಸೇರಿಸುವಂತೆ ಕೋಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಆದೇಶಿಸಿದ ಮೂರು ದಿನಗಳ ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಆತನಿಗೆ ನೋಟಿಸ್ ನೀಡಬೇಕು. ಬಂಧನ ವಿಚಾರವಾಗಿ ಯಾವುದೇ ಕಾರಣ ನೀಡುವಂತಿಲ್ಲ ಎಂದು ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿತ್ತು.

ಪ್ರಕರಣ ಹಿನ್ನೆಲೆ : ಕಳೆದ ತಿಂಗಳು ಜನವರಿ 5 ರಂದು ಪಡಿತರ ವಿತರಣೆಯಲ್ಲಿ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಷಹಜಹಾನ್ ಶೇಖ್ ನಿವಾಸದ ಮೇಲೆ ದಾಳಿ ನಡೆಸಲು ತೆರಳಿದ್ದ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರ ಭದ್ರತಾ ಪಡೆಗಳ ತಂಡದ ಮೇಲೆಯೇ ಆತನ ಬೆಂಬಲಿಗರು ದಾಳಿ ನಡೆಸಿದ್ದರು. ಈ ಸಂಘರ್ಷ ತಾರಕಕ್ಕೇರಿ ಇಡಿ ಹಾಗೂ ಕೇಂದ್ರ ಸಶಸ್ತ್ರ ಪಡೆಗಳ ವಾಹನಗಳನ್ನೂ ಧ್ವಂಸಗೊಳಿಸಲಾಗಿತ್ತು. ಮಾಧ್ಯಮದವರ ಮೇಲೂ ಹಲ್ಲೆ ನಡೆದಿತ್ತು. ಕ್ಯಾಮರಾ, ವಾಹನಗಳು ಹಾಗೂ ಇತರ ಉಪಕರಣಗಳನ್ನು ಒಡೆದು ಹಾಕಲಾಗಿತ್ತು. ಬಳಿಕ ಇಡಿ ಹಾಗೂ ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಹಾಗೂ ಮಾಧ್ಯಮದವರು ಘಟನಾ ಸ್ಥಳದಿಂದ ತೆರಳಿದ್ದರು.