ಧಾರವಾಡ: ರಾತ್ರಿ ಮಲಗುವಾಗ ಮಗು ಅಳುತ್ತದೆ ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಹೆಣ್ಣು ಮಗುವನ್ನೇ ಗೋಡೆಗೆ ಎಸೆದು ರಾಕ್ಷಸಿ ಕೃತ್ಯ ಮೆರೆದ ಘಟನೆ ತಾಲೂಕಿನ ಯಾದವಾಡ ಗ್ರಾಮದಲ್ಲಿ ನಡೆದಿದೆ.
ಶಂಭುಲಿಂಗಯ್ಯ ಶಹಾಪುರಮಠ ಎಂಬ ವ್ಯಕ್ತಿ ತನ್ನ ಒಂದು ವರ್ಷದ ಹೆಣ್ಣು ಮಗುವನ್ನು ಗೋಡೆಗೆ ಎಸೆದ ಪಾಪಿ ತಂದೆ. ಕಳೆದ ರಾತ್ರಿ ಮಲಗುವ ಸಮಯಕ್ಕೆ ಹಸಿವಿನಿಂದಲೋ, ಹೊಟ್ಟೆ ನೋವಿನಿಂದಲೋ ಮಗು, ಅಳಲು ಶುರು ಮಾಡಿದೆ. ಮಗು ಅಳುತ್ತಿದ್ದರಿಂದ ನಿದ್ದೆಗೆ ಭಂಗವಾಗಿ ಕೋಪಗೊಂಡಿದ್ದ ಶಂಭುಲಿಂಗಯ್ಯ, ಅಳುವ ಮಗುವನ್ನು ಸಮಾಧಾನ ಮಾಡಲಾಗದೇ ಮಗುವಿನ ಕಾಲು ಹಿಡಿದು ಎತ್ತಿ ಗೋಡೆಗೆ ಬಿಸಾಕಿದ್ದಾನೆ. ಇದರಿಂದ ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ.
ಸದ್ಯ ಮಗುವಿಗೆ ಕಿಮ್ಸ್‌ನ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕುಟುಂಬಸ್ಥರು ಪಾಪಿ ತಂದೆ ಶಂಭುಲಿಂಗಯ್ಯನ ಪೈಶಾಚಿ ಕೃತ್ಯಕ್ಕೆ ಕುಟುಂಬಸ್ಥರು ಆಕ್ರೋಶಗೊಂಡಿದ್ದು, ಗರಗ ಪೊಲೀಸ್ ಠಾಣೆಯಲ್ಲಿ ಶಂಬುಲಿಂಗಯ್ಯ ಶಾಪುರಮಠ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶಂಭುಲಿಂಗಯ್ಯನನ್ನು ವಶಕ್ಕೆ ಪಡೆದಿದ್ದಾರೆ.










