ಶಿವರಾತ್ರಿ ಹಬ್ಬಕ್ಕೆ ಲಕ್ಷಾಂತರ ಭಕ್ತರ ಪಾದಯಾತ್ರೆ- ಸ್ಥಳೀಯರಿಂದ ಉಚಿತ ಊಟದ ವ್ಯವಸ್ಥೆ…

34
firstsuddi

ಚಿಕ್ಕಮಗಳೂರು: ಶಿವರಾತ್ರಿ ಹಬ್ಬಕ್ಕೆ ಇನ್ನು ಕೆಲ ದಿನಗಳು ಬಾಕಿ ಇರುವಂತೆ ಲಕ್ಷಾಂತರ ಜನರು ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ.

ದಕ್ಷಿಣ ಕನ್ನಡ ಚಿಕ್ಕಮಗಳೂರು ಜಿಲ್ಲೆಯ ಸಂಪರ್ಕಿಸುವ ರಸ್ತೆಯಾದ ಮೂಡಿಗೆರೆ ಟು ಕೊಟ್ಟಿಗೆಹಾರದ ಮೂಲಕ ಜನರು ಸಾಗರದಂತೆ ಹೋಗುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಜನರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದು, ಕೊಟ್ಟಿಗೆಹಾರದಲ್ಲಿ ಕೆಲ ಭಕ್ತರು ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ. ನೂರಾರು ಕೀಲೋಮೀಟರ್ ಗಟ್ಟಲೆ ಭಕ್ತರು ನಡೆಗೆ ಮೂಲಕ ತೆರಳಿ ದೇವರ ದರ್ಶನ ಪಡೆಯಲಿದ್ದಾರೆ.

ಕಷ್ಟಗಳ ಪರಿಹಾರಕ್ಕೆ ಹಾಗೂ ಹರಕೆ ತೀರಿಸಲು ಭಕ್ತರು ಕೇಸರಿ ವಸ್ತ್ರಧರಿಸಿ ಉರಿಬಿಸಿಲಿನಲ್ಲಿ ಸಾವಿರಾರು ಮಂದಿ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ಕೆಲವರು ಹರಿಕೆಹೊತ್ತ ಭಕ್ತರು ಪಾದಯಾತ್ರೆ ಹೋಗುತ್ತಿದ್ದು, ವಯಸ್ಸಿನ ಮಿತಿ ಇಲ್ಲದೇ ಭಕ್ತರು ಪಾದಯಾತ್ರೆಯನ್ನು ಕೈಗೊಂಡಿದ್ದಾರೆ. ಉರಿಬಿಸಿಲನ್ನು ಲೆಕ್ಕಿಸದೆ ಕೆಲವರು ಬರಿಗಾಲಿನಲ್ಲಿ ಮತ್ತೆ ಕೆಲವರು ಚಪ್ಪಲಿ ಧರಿಸಿ ನಡೆದುಕೊಂಡು ಧರ್ಮಸ್ಥಳಕ್ಕೆ ತೆರಳುತ್ತಿದ್ದಾರೆ. ಆಯಾಸಗೊಂಡವರು ಬಸ್ ನಿಲ್ದಾಣ, ಮರದ ನೆರಳಿನಲ್ಲಿ ವಿಶ್ರಾಂತಿ ಪಡೆದು ಪಾದಯಾತ್ರೆಯನ್ನು ಮುಂದುವರೆಸುತ್ತಿದ್ದಾರೆ. ಇಷ್ಟಾರ್ಥ ನೆರವೇರಿಸುವಂತೆ ಹರಕೆ ಹೊತ್ತವರು ಪಾದಯಾತ್ರೆಯನ್ನು ಕೂಡಿಕೊಳ್ಳುತ್ತಿದ್ದಾರೆ. ವಿವಿಧ ಸಂಘ, ಸಂಸ್ಥೆಗಳು ಈಗಾಗಲೇ ಅನ್ನಸಂತರ್ಪಣೆ, ಆರೋಗ್ಯ ತಪಾಸಣೆಯನ್ನು ಹಮ್ಮಿಕೊಂಡಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಭಕ್ತರ ಸಂಖ್ಯೆ ಅಧಿಕಗೊಂಡಿದೆ. ಪಾದಯಾತ್ರೆಯಲ್ಲಿ ತೆರಳಿ ಮಂಜುನಾಥನ ದರ್ಶನ ಪಡೆದು ವಾಹನದಲ್ಲಿ ಹಿಂದಿರುಗಲಿದ್ದಾರೆ. ಮೂಡಿಗೆರೆಯ ಕಾಫಿಕ್ಯೂರಿಂಗ್ ಬಳಿ ಸೇವಾ ಸಮಿತಿ ವತಿಯಿಂದ ಉಳಿದುಕೊಳ್ಳಲು ಸ್ಥಳಾವಕಾಶ ನೀಡಿದೆ. 8ನೇ ವರ್ಷದ ಅನ್ನಸಂತರ್ಪಣೆ ಮತ್ತು ಉಚಿತ ವೈದ್ಯಕೀಯ ತಪಾಸಣೆಯನ್ನು ಹಮ್ಮಿಕೊಂಡಿದೆ. ಉರಿಬಿಸಿಲಿನಿಂದ ಬಂದವರು ಇಲ್ಲಿ ವಿಶ್ರಾಂತಿ ಪಡೆದು ಬಳಿಕ ಪಾದಯಾತ್ರೆಯನ್ನು ಮುಂದುವರೆಸುತ್ತಿದ್ದಾರೆ.