ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಕಾರ್ಯದರ್ಶಿ ನಡುವಿನ ಘರ್ಷಣೆಯಲ್ಲಿ ಕೆಪಿಎಸ್ಸಿ ಕಾರ್ಯದರ್ಶಿ ಕೆ.ಎಸ್. ಲತಾಕುಮಾರಿ ಅವರನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯ ನಿರ್ವಾಹಕ ನಿರ್ದೇಶಕರ ಸ್ಥಾನಕ್ಕೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಲತಾಕುಮಾರಿ ಅವರು ಹಲವು ದಿನಗಳಿಂದ ರಜೆಯಲ್ಲಿದ್ದ ಹಿನ್ನೆಲೆಯಲ್ಲಿ ಕಾರ್ಯದರ್ಶಿ ಸ್ಥಾನಕ್ಕೆ ಪ್ರಬಾರಿಯಾಗಿ ನೇಮಕಗೊಂಡಿದ್ದ ಕೆ. ರಾಕೇಶ್ಕುಮಾರ್ ಅವರನ್ನು ಈಗ ಅದೇ ಸ್ಥಾನದಲ್ಲಿ ಮುಂದುವರೆಸಲಾಗಿದೆ.
ಲತಾಕುಮಾರಿ ಅವರು ಸೆ.13 ರಂದು ಆಯೋಗದ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಅದಕ್ಕೂ ಮುನ್ನ ಕಾರ್ಯದರ್ಶಿಯಾಗಿದ್ದ ವಿಕಾಸ್ ಕಿಶೋರ್ ಸುರಳ್ಕರ್ ಅವರನ್ನೂ ಸರ್ಕಾರ ಆಯೋಗದ ಅಧ್ಯಕ್ಷರು, ಸದಸ್ಯರ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಿತ್ತು. ಇದೀಗ ಮತ್ತೆ ಲತಾಕುಮಾರಿ ಅವರನ್ನು ವರ್ಗಾವಣೆ ಮಾಡಿರುವುದರಿಂದ ಆರು ತಿಂಗಳಲ್ಲಿ ಇಬ್ಬರು ಕಾರ್ಯದರ್ಶಿಗಳ ವರ್ಗಾವಣೆಯಾದಂತಾಗಿದೆ.
ವರ್ಗಾವಣೆಗೆ ಸಂಘರ್ಷವೇ ಕಾರಣ: ಅಧ್ಯಕ್ಷರು, ಸದಸ್ಯರೊಂದಿಗಿನ ಸಂಘರ್ಷವೇ ಕಾರ್ಯದರ್ಶಿ ಲತಾಕುಮಾರಿ ಅವರ ವರ್ಗಾವಣೆಗೆ ಕಾರಣ ಎನ್ನಲಾಗಿದೆ. ಕೆಪಿಎಸ್ಸಿ ಗೆ ಕಾನೂನು ಸಲಹೆಗಾರರ ನೇಮಕಾತಿ, ಆಯ್ಕೆ ಪಟ್ಟಿಗಳ ಬಿಡುಗಡೆ ಮತ್ತಿತರ ವಿಚಾರಗಳಲ್ಲಿ ಅಧ್ಯಕ್ಷರ ವಿರುದ್ಧ ರಾಜ್ಯಪಾಲರು, ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದರು. ಆದರೆ, ನಿಯಮಗಳ ಪ್ರಕಾರ ಕಾರ್ಯದರ್ಶಿಯವರು ನೇರವಾಗಿ ರಾಜ್ಯಪಾಲರಿಗೆ ಪತ್ರ ಬರೆಯುವಂತಿಲ್ಲ. ಅದರ ಜೊತೆಗೆ ಕಳೆದ ಕೆಲವು ತಿಂಗಳುಗಳಿಂದ ಘರ್ಷಣೆಗಳು ನಡೆದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ ಎಂದು ತಿಳಿದು ಬಂದಿದೆ.










