ರಾಮೇಶ್ವರಂ ಕೆಫೆ ಬ್ಲಾಸ್ಟ್: ಬಾಂಬರ್‌ನ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ…

48
firstsuddi

ಬೆಂಗಳೂರು: ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ತನ್ನ ತನಿಖೆಯನ್ನು ಇನ್ನಷ್ಟು ಚುರುಕು ಮಾಡಿದೆ. ಇಂದು ಬಾಂಬರ್‌ನ ಫೋಟೋವನ್ನು ಹಂಚಿಕೊಂಡಿರುವ ಎನ್ಐಎ, ಬಾಂಬರ್ ಬಗ್ಗೆ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ತಿಳಿಸಿದೆ. ಅಲ್ಲದೇ ಮಾಹಿತಿ ನೀಡಿದ ವ್ಯಕ್ತಿಯನ್ನು ಗೌಪ್ಯವಾಗಿ ಇಡುವುದಾಗಿ ತಿಳಿಸಿದೆ.

ಸಿಸಿಬಿ ತನಿಖೆ ವೇಳೆ ಬಾಂಬರ್ ಮಾಸ್ಕ್ ಹಾಕಿಕೊಳ್ಳದ ಫೋಟೋ ಪತ್ತೆಯಾಗಿದ್ದು, ಇದೀಗ ಆ ಫೋಟೋವನ್ನು ಎನ್ಐಎ ಬಿಡುಗಡೆ ಮಾಡಿದೆ. ಅಲ್ಲದೇ ಆರೋಪಿ ಬಗ್ಗೆ ಗೊತ್ತಿದ್ದರೆ ಕೂಡಲೇ 080-29510900, 8904241100 ಸಂಖ್ಯೆಗೆ ಫೋನ್ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಎನ್ಐಎ ಮನವಿ ಮಾಡಿದೆ.

ಕೆಫೆ ಬಾಂಬ್ ಸ್ಫೋಟದ ತನಿಖೆಯನ್ನ ಎನ್ಐಎ ಅಧಿಕಾರಿಗಳು ಅಧಿಕೃತವಾಗಿ ಕೈಗೆತ್ತಿಕೊಂಡಿದ್ದು, ನಿನ್ನೆ ಕೆಫೆಗೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿದೆ. ಕ್ಯಾಶ್ ಕೌಂಟರ್, ಸಿಸಿಕ್ಯಾಮರಾ ಪರಿಶೀಲನೆ ನಡೆಸಿ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನು ಪೊಲೀಸರು ಸಹ ಸ್ಥಳದಲ್ಲಿ ಕಲೆ ಹಾಕಿರುವ 38 ಸ್ಯಾಂಪಲ್‌ಗಳ ಮಾಹಿತಿಯನ್ನ ಎನ್ಐಎ ಅಧಿಕಾರಿಗಳಿಗೆ ನೀಡಿದ್ದಾರೆ.

ಈ ವೇಳೆ ಅಧಿಕಾರಿಗಳು ಸ್ಥಳೀಯರ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ. ಕೆಫೆಯ ಮುಂಭಾಗದಲ್ಲಿಯೇ ಬಸ್ ನಿಲ್ದಾಣವಿದ್ದು, ಕೆಫೆಯವರೆಗೆ ಶಂಕಿತ ವ್ಯಕ್ತಿ ನಡೆದು ಬಂದ ದಾರಿಯನ್ನು ತನಿಖೆ ಮಾಡಿದೆ. ಘಟನೆ ನಡೆದ ಬಳಿಕ ಈತ ತಮಿಳುನಾಡು ಅಥವಾ ಕೇರಳ ರಾಜ್ಯಕ್ಕೆ ಹೋಗಿರಬಹುದು ಎನ್ನುವ ಶಂಕೆಯನ್ನೂ ಮಾಡಲಾಗಿದ್ದು, ಈ ರಾಜ್ಯಗಳಲ್ಲೂ ಕೂಡ ಎನ್ಐಎ ಕಾರ್ಯಾಚರಣೆಗೆ ಇಳಿದಿದೆ. ಪ್ರಕರಣದಲ್ಲಿ ಈವರೆಗೂ ಯಾರನ್ನೂ ವಶಕ್ಕೆ ಪಡೆದಿಲ್ಲ ಎನ್ನುವ ಮಾಹಿತಿಯನ್ನೂ ಅಧಿಕಾರಿಗಳು ತಿಳಿಸಿದ್ದಾರೆ.