ಕೋಲಾರ: ಕಾಲುಜಾರಿ ಕೆರೆಗೆ ಬಿದ್ದು ತಾಯಿ-ಮಗ ಇಬ್ಬರೂ ಮೃತಪಟ್ಟಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕೋಡಿಪಲ್ಲಿ ಗ್ರಾಮದ ಕೆರೆಯಲ್ಲಿ ನಡೆದಿದೆ.
ಮೃತರನ್ನು ಶ್ರೀನಿವಾಸಪುರ ಪಟ್ಟಣದ ಮಾರುತಿ ನಗರ ನಿವಾಸಿಗಳಾದ ಗೀತಾ( 26) ಹಾಗೂ ಯಶವಂತ್ (6) ಎಂದು ಗುರುತಿಸಲಾಗಿದೆ. ಮೃತರು ಕೋಡಿಪಲ್ಲಿ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಇಂದು ಬೆಳಗ್ಗೆ ತಾಯಿಯೊಂದಿಗೆ ಇಬ್ಬರು ಮಕ್ಕಳು ಕೆರೆ ಬಳಿ ಹೋಗಿದ್ದರು. ಈ ವೇಳೆ, ಮಗ ಯಶವಂತ್ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ. ಮಗನನ್ನ ರಕ್ಷಣೆ ಮಾಡಲು ತಾಯಿ ಮುಂದಾದ ವೇಳೆ ಇಬ್ಬರೂ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಈ ಕುರಿತು ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










