ಕರ್ಣಾಟಕ ಬ್ಯಾಂಕ್​ನಲ್ಲಿ ಕೋಟ್ಯಂತರ ನಗದು, ಚಿನ್ನಾಭರಣ ದರೋಡೆ ಪ್ರಕರಣ; ಮೂವರು ಆರೋಪಿಗಳ ಬಂಧನ…

46
firstsuddi

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಭಾರೀ ಕಳ್ಳತನ ನಡೆದಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ್ಯಂತರ ನಗದು ಮತ್ತು ಚಿನ್ನಾಭರಣ ದೋಚಿದ್ದ ಮೂವರನ್ನು ಪುತ್ತೂರು ಉಪವಿಭಾಗದ ಪೊಲೀಸರ ತಂಡ ಬಂಧಿಸಿದೆ.

ಆರೋಪಿಗಳನ್ನು ಕಾಸರಗೋಡು ಮೂಲದ ಖಲಂದರ್, ರಫೀಕ್, ಬಾಯಾರು ಮೂಲದ ದಯಾನಂದ ಎಂದು ಗುರುತಿಸಲಾಗಿದೆ. ಈ ಮೂವರು ಕಳ್ಳತನದ ಪ್ರಮುಖ ರುವಾರಿಗಳು ಎನ್ನಲಾಗಿದೆ. ಫೆ.28 ರಂದು ಈ ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಮಾರ್ಚ್ 10 ರಂದು ಸ್ಥಳ ಮಹಜರಿಗೆ ಕರೆದುಕೊಂಡು ಬಂದಿದ್ದ ವೇಳೆ ಅಧಿಕೃತವಾಗಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಬೀಝಾ ಕಾರಿನ ಮೂಲಕ ಆಗಮಿಸಿದ ಕಳ್ಳರು, ಬ್ಯಾಂಕ್ ಕಿಟಕಿಯ ಸರಳು ತುಂಡರಿಸಿ, ಗ್ಯಾಸ್ ಕಟ್ಟರ್ ಮೂಲಕ ಸೇಫ್ ಲಾಕರ್ ಬಾಗಿಲನ್ನು ತೆರೆದು ಲಾಕರ್ ನಲ್ಲಿದ್ದ ನಗದು ಹಾಗೂ ಚಿನ್ನಾಭರಣವನ್ನು ದೋಚಿದ್ದರು. ಆ ಬಳಿಕ ನಾಲ್ಕು ಪಾಲು ಮಾಡಿಕೊಂಡ ಕಳ್ಳರು ಒಂದು ಪಾಲನ್ನು ಬಾಯಾರಿನ ಪೊಸಡಿ ಗುಂಪೆ ಗುಡ್ಡದ ತಪ್ಪಲಿನ ಸಂಜಂಕಿಲ ಸಮೀಪದ ನಿರ್ಜನ ಪ್ರದೇಶದಲ್ಲಿರುವ ಆಟದ ಮೈದಾನವೊಂದರಲ್ಲಿ ಇದನ್ನು ಅಡಗಿಸಿಟ್ಟಿರುವುದಾಗಿ ವಿಚಾರಣೆ ವೇಳೆ ಬಹಿರಂಗ ಪಡಿಸಿದ್ದರು.

ಕೆಲವು ವರ್ಷಗಳಿಂದ ವೆಲ್ಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ಸೇಫ್ ಲಾಕರ್ ಅನ್ನು ತುಂಡರಿಸಲು ಸಹಕರಿಸಿದ್ದು, ಆರೋಪಿಗಳು ಕಾಸರಗೋಡು ಮೂಲದ ವಿವಿಧ ಪ್ರಕರಣದಲ್ಲಿ ಆರೋಪಿಗಳಾಗಿರುವವರು ಎಂದು ತನಿಖೆಯಿಂದ ತಿಳಿದು ಬಂದಿದೆ.