ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ 2 ವರ್ಷದ ಬಾಲಕ- ರಕ್ಷಣೆಗೆ ಮುಂದುವರೆದ ಕಸರತ್ತು, ಕಾರ್ಯಾಚರಣೆಗೆ ಬಂಡೆಗಳು ಅಡ್ಡಿ…

45
firstsuddi

ವಿಜಯಪುರ: ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ತೋಟದಲ್ಲಿ ಕೊಳವೆ ಬಾವಿಗೆ ಬಿದ್ದ 2 ವರ್ಷದ ಸಾತ್ವಿಕ್ ರಕ್ಷಣೆಗಾಗಿ ಅಹೋರಾತ್ರಿಯಿಂದಲೇ ಕಾರ್ಯಾಚರಣೆ ನಡೆಯುತ್ತಿದೆ. 400 ಅಡಿ ಆಳದ ಕೊಳವೆ ಬಾವಿ ಇದಾಗಿದ್ದು, ಕಳೆದ 13 ಗಂಟೆಯಿಂದ ಮಗುವಿನ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಬೆಳಗಾವಿ, ಕಲಬುರಗಿಯಿಂದ ಎಸ್‌ಡಿಆರ್‌ಎಫ್‌, ಹೈದರಾಬಾದ್‌ನಿಂದ ಎನ್‌ಡಿಆರ್‌ಎಫ್‌ ತಂಡ ರಾತ್ರಿಯೇ ಸ್ಥಳಕ್ಕೆ ಬಂದಿದೆ. ಸ್ಥಳೀಯ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಜೊತೆಗೂಡಿದ್ದು ರಕ್ಷಣಾ ಕಾರ್ಯಾಚರಣೆ ವೇಗವಾಗಿ ನಡೆಸುತ್ತಿದೆ.

ಸತೀಶ ಮುಜಗೊಂಡ ಹಾಗೂ ಪೂಜಾ ಮುಜಗೊಂಡ ಎಂಬುವರ ಪುತ್ರ ಸಾತ್ವಿಕ್ ನಿನ್ನೆ ಸಂಜೆ ವೇಳೆಗೆ ಆಟವಾಡುತ್ತ ಕೊಳವೆ ಬಾವಿಗೆ ಬಿದ್ದಿದ್ದಾನೆ. ಬಾಲಕನ ರಕ್ಷಣೆಗೆ ನಿನ್ನೆ ಸಂಜೆ 6 ಗಂಟೆಯಿಂದಲೇ ಕಾರ್ಯಾಚರಣೆ ಶುರುವಾಗಿದ್ದು, ರಕ್ಷಣಾ ತಂಡವು ಸುಮಾರು 20 ಅಡಿಗಳಷ್ಟು ಡಿಗ್ಗಿಂಗ್ ಮಾಡಿದೆ. ಅಲ್ಲಿಂದ ಬಾಲಕ ಇರುವ ಕಡೆಗೆ 5 ಅಡಿಗಳಷ್ಟು ಸುರಂಗ ಕೊರೆಯಲಾಗುತ್ತಿದೆ. ಈಗಾಗಲೇ ಅಡ್ಡಡ್ಡ 3 ಅಡಿಗಳಷ್ಟು ಸುರಂಗ ಮಾಡಲಾಗಿದೆ. ಆದರೆ, ಕಾರ್ಯಾಚರಣೆಗೆ ಗಟ್ಟಿಯಾದ ಕಲ್ಲು ಬಂಡೆಗಳು ಅಡ್ಡಿಯಾಗುತ್ತಿವೆ. ಬಂಡೆಗಳನ್ನು ಬ್ರೇಕ್ ಮಾಡುತ್ತ ಕಾರ್ಯಾಚರಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಮುಜಗೊಂಡ ದಂಪತಿಯು ನಾಲ್ಕು ಎಕರೆ ಜಮೀನಿನಲ್ಲಿ ಕಬ್ಬು, ಲಿಂಬೆ ಬೆಳೆಯಲು ಕೊಳವೆಬಾವಿ ಕೊರೆಸಿದ್ದರು. ಈಗಾಗಲೇ ಮಗುವಿನ ಉಸಿರಾಟಕ್ಕಾಗಿ ಆಕ್ಸಿಜನ್ ಪೂರೈಕೆ ಮಾಡಲಾಗಿದೆ. ಸ್ಥಳದಲ್ಲಿ ಆರೋಗ್ಯಾಧಿಕಾರಿಗಳ ನೇತೃತ್ವದ ವೈದ್ಯರ ತಂಡ ಕರ್ತವ್ಯದಲ್ಲಿ ತೊಡಗಿದೆ. ಆಂಬ್ಯುಲೆನ್ಸ್ ಕೂಡ ಇರಿಸಿಕೊಳ್ಳಲಾಗಿದೆ. ಸಾತ್ವಿಕ್ ಬದುಕಿ ಬರಲೆಂದು ಪೂಜೆ, ಪುನಸ್ಕಾರ ನಡೆಯುತ್ತಿವೆ. ಲಚ್ಯಾಣ ಗ್ರಾಮದ ಸಿದ್ದಪ್ಪ ಮಹಾರಾಜರ ಗದ್ದುಗೆಯಲ್ಲಿಯೂ ಗ್ರಾಮದ ಯುವಕರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದಾರೆ.