ಶೋಭಾ ಕರಂದ್ಲಾಜೆ ಮತ ಪ್ರಚಾರದ ವೇಳೆ ಕಾರಿಗೆ ಬೈಕ್ ಡಿಕ್ಕಿ- ಸವಾರ ಸಾವು…

43
firstsuddi

ಬೆಂಗಳೂರು: ಲೋಕಸಭೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ರ್‍ಯಾಲಿ ವೇಳೆ ಕಾರಿಗೆ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿರುವ ಘಟನೆ ಕೆ.ಆರ್.ಪುರಂನ ಗಣೇಶ ದೇವಸ್ಥಾನದ ಬಳಿ ನಡೆದಿದೆ.

ಕೆ.ಆರ್.ಪುರಂನ ಟಿ.ಸಿ.ಪಾಳ್ಯದ ನಿವಾಸಿ ಪ್ರಕಾಶ್ (50) ಸಾವನ್ನಪ್ಪಿದವರು ಎಂದು ತಿಳಿದುಬಂದಿದೆ. ಕರಂದ್ಲಾಜೆ ಅವರ ಪ್ರಚಾರದ ರ್‍ಯಾಲಿಯಲ್ಲಿ ಸಾಕಷ್ಟು ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಭಾಗಿಯಾಗಿದ್ದರು. ಈ ವೇಳೆ ನಿಂತಿದ್ದ ಶೋಭಾ ಕರಂದ್ಲಾಜೆ ಅವರ ಕಾರಿನ ಡೋರ್ ಒಪನ್ ಮಾಡುತ್ತಿದ್ದಾಗ ಬೈಕ್ ಏಕಾಏಕಿ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರ ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಕೆಆರ್ ಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಕಾಶ್ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದರು.

ಘಟನೆಯ ಕುರಿತು ಸಂತಾಪ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ, “ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಲ್ಲಿ ಒಬ್ಬರಾದ ಪ್ರಕಾಶ್ ನಿಧನದಿಂದ ದುಃಖವಾಗಿದೆ. ಈ ಅವಘಡ ಸಂಭವಿಸಬಾರದಿತ್ತು. ಅವರ ಕುಟುಂಬದೊಂದಿಗೆ ನಾವೆಲ್ಲರೂ ಇದ್ದೇವೆ. ಪಕ್ಷದ ವತಿಯಿಂದ ಕುಟುಂಬಕ್ಕೆ ಪರಿಹಾರದ ವ್ಯವಸ್ಥೆ ಮಾಡಲಾಗುವುದು” ಎಂದರು.