ದೆಹಲಿ ಅಬಕಾರಿ ನೀತಿ ಹಗರಣ: ಜೈಲಿನಿಂದಲೇ ಬಿಆರ್‌ಎಸ್ ನಾಯಕಿಯನ್ನು ಬಂಧಿಸಿದ ಸಿಬಿಐ.

41
firstsuddi

ನವದೆಹಲಿ: ದೆಹಲಿ ಮದ್ಯ ನೀತಿಗೆ ಸಂಬಂಧಿಸಿದ ಆಪಾದಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾರತ್ ರಾಷ್ಟ್ರ
ಸಮಿತಿ (ಬಿಆರ್‌ಎಸ್) ನಾಯಕಿ ಕೆ.ಕವಿತಾ ಅವರನ್ನು ಕೇಂದ್ರ ತನಿಖಾ ದಳವು ತಿಹಾರ್ ಜೈಲಿನಲ್ಲಿ ಬಂಧಿಸಿದೆ.

ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿ ಕೆ ಕವಿತಾ ಅವರು ‘ಸೌತ್ ಗ್ರೂಪ್’ನ ಪ್ರಮುಖ ಸದಸ್ಯೆ ಎಂದು ಆರೋಪಿಸಲಾಗಿದೆ. ಇದು ಮದ್ಯದ ದೊಡ್ಡ ಷೇರಿಗೆ ಪ್ರತಿಯಾಗಿ ದೆಹಲಿಯಲ್ಲಿ ಆಡಳಿತಾರೂಢ ಎಎಪಿಗೆ 100 ಕೋಟಿ ಕಿಕ್​ಬ್ಯಾಕ್ ನೀಡಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಕಳೆದ ಮಂಗಳವಾರ ಆಕೆಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.

ಸಿಬಿಐ ಅಧಿಕಾರಿಗಳು ಇತ್ತೀಚೆಗೆ ವಿಶೇಷ ನ್ಯಾಯಾಲಯದಿಂದ ಅನುಮತಿ ಪಡೆದು ಜೈಲಿನೊಳಗೆ ಕವಿತಾರನ್ನು ವಿಚಾರಣೆ ನಡೆಸಿದ್ದರು. ಪ್ರಕರಣದ ಸಹ ಆರೋಪಿಯಾಗಿರುವ ಬುಚ್ಚಿ ಬಾಬು ಅವರ ಫೋನ್​ನಲ್ಲಿ ವಾಟ್ಸ್‌ಆ್ಯಪ್ ಚಾಟ್ ಮತ್ತು ಭೂ ಅವ್ಯವಹಾರದ ಕುರಿತು ಬಿಆರ್‌ಎಸ್ ನಾಯಕಿಯನ್ನು ಪ್ರಶ್ನಿಸಲಾಗಿದೆ. ಇದರ ಜತೆಗೆ ರದ್ದಾಗಿರುವ ದೆಹಲಿ ಮದ್ಯ ನೀತಿ ಹಗರಣದಲ್ಲಿ 100 ಕೋಟಿ ರೂಪಾಯಿ ಕಿಕ್​ಬ್ಯಾಕ್ ನೀಡಿದ ಬಗ್ಗೆಯೂ ವಿಚಾರಣೆ ನಡೆಸಲಾಗಿದೆ.

ಪ್ರಕರಣದಲ್ಲಿ ಕವಿತಾ ಅವರ ಸಂಸ್ಥೆ ಭಾಗಿಯಾಗಿದೆ ಎಂಬ ಆರೋಪದ ಮೇಲೆ ಪ್ರಶ್ನಿಸಲು ಸಿಬಿಐ ಅಧಿಕಾರಿಗಳು ಈಚೆಗೆ ತಿಹಾರ್ ಜೈಲಿಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ. ಬಿಆರ್‌ಎಸ್ ನಾಯಕಿ ಅಧಿಕಾರಿಗಳ ಪ್ರಶ್ನೆಗೆ ಸರಿಯಾದ ಉತ್ತರ ನೀಡದೇ ಇದ್ದುದರಿಂದ ಇದೀಗ ಬಂಧನಕ್ಕೆ ಒಳಪಡಿಸಲಾಗಿದೆ.