ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ ಉಗ್ರರು ಬೆಂಗಳೂರಿಗೆ ಶಿಫ್ಟ್: ನ್ಯಾಯಾಧೀಶರ ಮುಂದೆ ಬಂಧಿತ ಉಗ್ರರ ಹಾಜರುಪಡಿಸಲಿರುವ ಎನ್ಐಎ.

38
firstsuddi

ಬೆಂಗಳೂರು: ನಗರದ ಕುಂದಲಹಳ್ಳಿಯಲ್ಲಿನ ದಿ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ಮಾಸ್ಟರ್​ಮೈಂಡ್ ಹಾಗೂ ಸ್ಫೋಟಕ ಇರಿಸಿದ್ದ ಉಗ್ರನನ್ನು ಕೋಲ್ಕತ್ತಾದಲ್ಲಿ ಬಂಧಿಸಿರುವ ಎನ್ಐಎ ಅಧಿಕಾರಿಗಳು ನಗರಕ್ಕೆ ಕರೆತಂದಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ನಿನ್ನೆ ತಡರಾತ್ರಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂಧಿತರನ್ನು ಕರೆ ತಂದ ಅಧಿಕಾರಿಗಳು, ಮಡಿವಾಳದ ಟೆಕ್ನಿಕಲ್ ಸೆಂಟರ್​​ನಲ್ಲಿ ಇರಿಸಿದ್ದಾರೆ. ಎರಡನೇ ಶನಿವಾರ ಹಿನ್ನೆಲೆಯಲ್ಲಿ ಎನ್ಐಎ ವಿಶೇಷ ನ್ಯಾಯಾಲಯ ಕಾರ್ಯನಿರ್ವಹಿಸದ ಕಾರಣ ಕೋರಮಂಗಲದ ಎನ್​​ಜಿವಿ ಬಡಾವಣೆಯಲ್ಲಿರುವ ನ್ಯಾಯಾಧೀಶರ ಮನೆಗೆ ಬೆಳಗ್ಗೆ 10.30 ರ ಬಳಿಕ ಕರೆದೊಯ್ದು, ಹೆಚ್ಚಿನ ವಿಚಾರಣೆಗೊಳಪಡಿಸಲು ರಿಮ್ಯಾಂಡ್ ಅರ್ಜಿ ಸಲ್ಲಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ಯುವ ಮುನ್ನ ಉಗ್ರರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಸೆಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ.

ಪಾತಕಿ ಮುಸಾವೀರ್ ಶಾಜೀಬ್ ಹುಸೇನ್ ಹಾಗೂ ಬಾಂಬ್ ಇಡುವ ಯೋಜನೆ ರೂಪಿಸಿದ್ದ ಪ್ರಧಾನ ಸೂತ್ರಧಾರಿ ಅಬ್ದುಲ್ ಮತೀನ್ ತಾಹಾನನ್ನು ರಾಷ್ಟ್ರೀಯ ತನಿಖಾ ದಳ ಕೋಲ್ಕತ್ತಾದಲ್ಲಿ ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಮತೀನ್, ತುಂಗಾತೀರದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಿದ್ದ. ಉಗ್ರ ಶಾರಿಕ್‌ಗೆ ಕುಕ್ಕರ್ ಕೊಟ್ಟು ಮಂಗಳೂರಿನಲ್ಲೂ ಸ್ಫೋಟ ಮಾಡಿಸಿದ್ದ. ಅದೇ ರೀತಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಡಲು ಮತೀನ್ ಮಸಲತ್ತು ಮಾಡಿದ್ದ ಎನ್ನುವುದು ಎನ್ಐಎ ತನಿಖೆಯಿಂದ ಹೊರಬಿದ್ದಿದೆ.

ಮತೀನ್ ನೀಡಿದ ಸೂಚನೆಯಂತೆ ಬಾಂಬ್ ಇಟ್ಟು ಎಸ್ಕೇಪ್ ಆಗಿದ್ದ ಬಾಂಬರ್ ಮುಸಾವಿರ್, ಸೀದಾ ಪಶ್ಚಿಮ ಬಂಗಾಳಕ್ಕೆ ಹೋಗಿದ್ದ. ಈತನಿಗಾಗಿ ಎನ್ಐಎ ಅಧಿಕಾರಿಗಳು, ಕರ್ನಾಟಕ, ಕೇರಳ, ತೆಲಂಗಾಣ ಸೇರಿದಂತೆ ಹಲವು ರಾಜ್ಯದಲ್ಲಿ ಶೋಧ ನಡೆಸಿದ್ದರು. ಇಬ್ಬರು ಉಗ್ರರು ನಕಲಿ ಗುರುತು ನೀಡಿ ಕೊಲ್ಕತ್ತಾದ ಮೇದಿನಿಪುರ ಹೋಟೆಲ್​​ನ ರೂಮಿನಲ್ಲಿ ಉಳಿದುಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಸ್ಥಳೀಯ ಪೊಲೀಸರ ನೆರವಿನಿಂದ ಇಬ್ಬರನ್ನೂ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು.

ಉಗ್ರರ ಬಳಿ ಕರ್ನಾಟಕದ ಇಬ್ಬರ ನಕಲಿ ಆಧಾರ ಕಾರ್ಡ್ ಪತ್ತೆ: ಇಬ್ಬರ ಬಂಧನ ಬಳಿಕ ಉಗ್ರರ ಬಳಿ ಕರ್ನಾಟಕದ ಇಬ್ಬರ ನಕಲಿ ಆಧಾರ ಕಾರ್ಡ್ ಪತ್ತೆಯಾಗಿವೆ. ಎನ್ಐಎ ಅಧಿಕಾರಿಗಳು ಉಗ್ರರನ್ನು ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಬಂಧಿಸಿದ್ದು, ಆರೋಪಿಗಳ ಬಳಿ ಕಲಬುರಗಿಯ ಓರ್ವ ಯುವಕನ ನಕಲಿ ಆಧಾರ ಕಾರ್ಡ್ ಪತ್ತೆಯಾಗಿದೆ.

ಕಲಬುರಗಿಯ ವರ್ದಾನಗರ ನಿವಾಸಿಯಾಗಿರುವ ಅನಮೂಲ ಕುಲಕರ್ಣಿ ಎಂಬ ಯುವಕನ ನಕಲಿ ಆಧಾರ ಕಾರ್ಡ್ ಉಗ್ರರ ಬಳಿ ಇತ್ತು. ಟೆಕ್ಕಿ ಅನಮೂಲ ಕುಲಕರ್ಣಿ ಸದ್ಯ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಉಗ್ರರಿಗೆ ಅನಮೂಲ ಕುಲಕರ್ಣಿ ಅವರ ಆಧಾರ ಕಾರ್ಡ್ ಸಿಕ್ಕಿದ್ದಾದರು ಹೇಗೆ? ಅನಮೂಲ ಕುಲಕರ್ಣಿ ಅವರ ಆಧಾರ ಕಾರ್ಡ್ ಅನ್ನು ಉಗ್ರರರು ಹೇಗೆ ಪಡೆದರು? ಹೀಗೆ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.