ರಸ್ತೆ ಗುಂಡಿಗೆ ಬಿದ್ದು ಯುವಕ ಸಾವು- ಜಲಮಂಡಳಿ ವಿರುದ್ಧ ಆಕ್ರೋಶ…

40
firstsuddi

ಬೆಂಗಳೂರು: ಜಲಮಂಡಳಿಯಿಂದ ತೋಡಲಾಗಿದ್ದ ಗುಂಡಿಗೆ ಬಿದ್ದು ಯುವಕ ಸಾವನ್ನಪ್ಪಿರುವ ದಾರುಣ ಘಟನೆ ಕೆಂಗೇರಿ ಸಮೀಪದ ಕೊಮ್ಮಘಟ್ಟ ಸರ್ಕಲ್​ನಲ್ಲಿ ನಿನ್ನೆ ರಾತ್ರಿ ನಡೆದಿದೆ.

ಸದ್ದಾಂ ಹುಸೇನ್ (20) ಸಾವನ್ನಪ್ಪಿದ ದುದೈರ್ವಿ. ಘಟನೆಯಲ್ಲಿ ಉಮ್ರಾನ್ ಪಾಷಾ ಹಾಗೂ ಮುಬಾರಕ್ ಪಾಷಾ ಎಂಬುವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಮೂವರು ಸ್ನೇಹಿತರಾಗಿದ್ದು ಜೆ. ಜೆ ನಗರ ನಿವಾಸಿಗಳಾಗಿದ್ದಾರೆ. ನಿನ್ನೆ ರಾತ್ರಿ ಸುಮಾರು 9 ಗಂಟೆ ವೇಳೆಗೆ ಸದ್ದಾಂ ಹುಸೇನ್ ತನ್ನ ಇನ್ನಿಬ್ಬರನ್ನ ಕೂರಿಸಿಕೊಂಡು ಬೈಕ್​ನಲ್ಲಿ ಬರುವಾಗ ಕೊಮ್ಮಘಟ್ಟ ಬಳಿ ಜಲಮಂಡಳಿಯು ಪೈಪ್ ಕಾಮಗಾರಿಗಾಗಿ ತೋಡಿದ್ದ ಸುಮಾರು 10 ಅಡಿ ಗುಂಡಿಗೆ ಬೈಕ್ ಸಮೇತ ಬಿದ್ದಿದ್ದಾರೆ. ಪರಿಣಾಮ ಸದ್ದಾಂ ಹುಸೇನ್ ಸಾವನ್ನಪ್ಪಿದರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಸ್ಥಳೀಯರ ನೆರವಿನಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗುಂಡಿ ಪಕ್ಕ ಯಾವುದೇ ಬ್ಯಾರಿಕೇಡ್ ಅಳವಡಿಸದಿರುವುದು ಘಟನೆಗೆ ಕಾರಣ ಎನ್ನಲಾಗುತ್ತಿದೆ.

ಇನ್ನೂ ಮೃತ ಯುವಕ ಸದ್ದಾಂ ಪಾಷಾ ಸಂಬಂಧಿಕರು ಮತ್ತು ಸ್ಥಳೀಯರು ಜಲಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೈಪ್​ಲೈನ್ ಕಾಮಗಾರಿ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಯಾವುದೇ ಬ್ಯಾರಿಕೇಡ್ ಅಥವಾ ಸೂಚನಾ ಫಲಕ ಅಳವಡಿಸದಿರುವುದು ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.