ತುಮಕೂರು: ಕುಂಚಿಟಿಗ ಸಮುದಾಯ ಭವನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಭಾಷಣ ಮಾಡುತ್ತಿದ್ದ ವೇಳೆ ವೇದಿಕೆಗೆ ನುಗ್ಗಿದ ಇಬ್ಬರು ಮಹಿಳೆಯರು ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದ್ದಾರೆ.
ಗ್ಯಾರಂಟಿಯಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ’ ಎಂಬ ಮಾಜಿ ಸಿಎಂ ಕುಮಾರಸ್ವಾಮಿಯವರ ಹೇಳಿಕೆ ಖಂಡಿಸಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಪೊಲೀಸರು ಕಾರ್ಯಕರ್ತೆಯರನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಿಂದ ತಬ್ಬಿಬ್ಬಾದ ದೇವೇಗೌಡರು ಕೆಲ ಕಾಲ ಭಾಷಣ ನಿಲ್ಲಿಸಿ ನಂತರ ಮಾತನಾಡಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರವಾಗಿ .ಹೆಚ್.ಡಿ. ಕುಮಾರಸ್ವಾಮಿಯವರು ದೊಡ್ಡಬಳ್ಳಾಪುರದಲ್ಲಿ ಪ್ರಚಾರ ನಡೆಸಲು ಆಗಮಿಸಿದ್ದ ವೇಳೆ ಕುಮಾರಸ್ವಾಮಿ ಗೋ ಬ್ಯಾಕ್ ಘೋಷಣೆಯನ್ನು ಕಾಂಗ್ರೆಸ್ ಮಹಿಳಾ ಘಟಕ ಮಹಿಳೆಯರು ಕೂಗಿ ಪ್ರತಿಭಟನೆ ನಡೆಸಿದರು.
ಚುನಾವಣೆ ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುವ ಭರದಲ್ಲಿ “ಗ್ಯಾರಂಟಿ ಯೋಜನೆಯಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆಂದು” ಹೇಳಿದ್ದರು.
ಈ ಹೇಳಿಕೆಗೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ರೇವತಿ ಅನಂತರಾಮಯ್ಯ ಅವರು ಮಾಧ್ಯಮದೊಂದಿಗೆ ಮಾತನಾಡಿ, “ಕುಮಾರಸ್ವಾಮಿ ಅವರ ಮನೆಯಲ್ಲಿ ಅಕ್ಕ ತಂಗಿಯರು ಇಲ್ಲವೇ. ಅವರ ಹೆಂಡತಿ ಮತ್ತು ಸೊಸೆ ಸಹ ಒಂದು ಹೆಣ್ಣು. ಈ ಹಿಂದಿನ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಸುಮಲತಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಇರೋದು ಮಹಿಳೆಯ ಕಷ್ಟಕ್ಕೆ ಸಹಾಯವಾಗಲೆಂದು ಸರ್ಕಾರ ಜಾರಿಗೆ ತಂದಿದೆ. ಇದರಿಂದ ಬಡ ಮಹಿಳೆಯರು, ಗಂಡನನ್ನು ಕಳೆದುಕೊಂಡ ವಿಧವೆಯರಿಗೆ, ಮಕ್ಕಳಿಂದ ದೂರವಾದ ವಯಸ್ಸಾದ ಮಹಿಳೆಯರಿಗೆ ಅನುಕೂಲವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂಬ ಹೇಳಿಕೆಗೆ ಮಹಿಳೆಯರ ಬಳಿ ಕ್ಷಮೆಯಾಚಿಸಬೇಕು ಎಂದು” ಇದೇ ವೇಳೆ ಆಗ್ರಹಿಸಿದರು.










