ಶಿವಮೊಗ್ಗ: ಸಿಡಿಲು ಬಡಿದು ವ್ಯಕ್ತಿ ಸಾವು…

43
firstsuddi

ಶಿವಮೊಗ್ಗ: ನಗರದಲ್ಲಿ ನಿನ್ನೆ ಸಂಜೆ ಅರ್ಧ ಗಂಟೆ ಕಾಲ ಮಳೆ ಸುರಿದಿದೆ. ಗುಡುಗು ಸಿಡಿಲಿನೊಂದಿಗೆ ಬಿರುಸಿನ ಮಳೆ ಸುರಿದಿದ್ದು, ಹೊಲದಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಮೃತಪಟ್ಟು, ಮತ್ತೊಬ್ಬ ಗಾಯಗೊಂಡಿರುವ ಘಟನೆ ನಡೆದಿದೆ.

ನಿನ್ನೆ ಸಂಜೆ 6 ಗಂಟೆ ಸುಮಾರು ಹರಮಘಟ್ಟದಲ್ಲಿ ಭಾರಿ ಗಾಳಿ, ಸಿಡಿಲು ಸಹಿತ ಮಳೆ ಸುರಿದಿದೆ. ಈ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್ (28) ಎಂಬುವರಿಗೆ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ರಾಕೇಶ್ ಜೊತೆ ಆತನ ಸ್ನೇಹಿತ ರುದ್ರೇಶ್ ಕೂಡ ಇದ್ದ. ಇವರಿಗೂ ಸಿಡಿಲು ತಾಗಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದೇ ದಾರಿಯಲ್ಲಿ ಕುರಿ ಮೇಯಿಸಿಕೊಂಡು ಬರುತ್ತಿದ್ದ ಕುರಿಗಾಯಿಗಳಿಂದ ರಾಕೇಶ್ ಮೃತಟ್ಟಿದ್ದು ಮತ್ತು ರುದ್ರೇಶ್ ಗಾಯಗೊಂಡಿರುವ ವಿಷಯ ತಿಳಿದು ಬಂದಿದೆ. ದೃಶ್ಯ ಕಂಡ ತಕ್ಷಣ ಕುರಿಗಾಯಿಗಳು ಈ ವಿಷಯವನ್ನು ಗ್ರಾಮಕ್ಕೆ ತಲುಪಿಸಿದ್ದಾರೆ. ಕೂಡಲೇ ಗ್ರಾಮಸ್ಥರು ಹೊಲಕ್ಕೆ ತೆರಳಿದಾಗ ಸಾವಿನ ವಿಚಾರ ತಿಳಿದು ಬಂದಿದೆ. ಸದ್ಯ ರಾಕೇಶ್ ಶವವನ್ನು ಶಿವಮೊಗ್ಗಕ್ಕೆ ರವಾನೆ ಮಾಡಲಾಗಿದೆ. ರುದ್ರೇಶನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.