ಶಿವಮೊಗ್ಗ: ಬಿಜೆಪಿಯಿಂದ ತಮ್ಮನ್ನು ಉಚ್ಚಾಟಿಸಿದ್ದರ ಬಗ್ಗೆ ಮಾಜಿ ಡಿಸಿಎಂ, ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
ಶಿವಮೊಗ್ಗದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಉಚ್ಚಾಟನೆ ಮಾಡುತ್ತಾರೆ ಎಂದು ನಿರೀಕ್ಷಿಸಿದ್ದೆ. ಪಕ್ಷವೇ ಕ್ರಮ ಕೈಗೊಳ್ಳಲಿ ಎಂದು ಕಾಯುತ್ತಿದ್ದೆ. ಇಂತಹ ಯಾವುದೇ ನಿರ್ಧಾರಕ್ಕೆ ನಾನು ಹೆದರುವುದಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು, ಪ್ರಧಾನಿ ಮೋದಿ ಅವರನ್ನು ಬೆಂಬಲಿಸುವೆ ಎಂದು ಬಿಜೆಪಿಯಿಂದ ಉಚ್ಚಾಟಿತ, ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.
ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಬಿಜೆಪಿಯಲ್ಲಿದ್ದಾಗಲೇ ಹೇಳಿಕೊಂಡು ಬಂದಿದ್ದೇನೆ. ಈಗ ಪಕ್ಷ ನನ್ನ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ಮಾಹಿತಿ ಇದೆ. ಇನ್ನೂ ನನಗೆ ಯಾವುದೇ ಅಧಿಕೃತ ಪತ್ರ ಸಿಕ್ಕಿಲ್ಲ. ಹೀಗಾಗಿ ನಾನು ಚುನಾವಣೆಗೆ ನಿಲ್ಲುವುದೂ ಸ್ಪಷ್ಟ, ಗೆಲ್ಲುವುದೂ ಸ್ಪಷ್ಟ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡೋಕೆ ಕೈ ಎತ್ತುತ್ತೇನೆ ಎಂದರು.
ಬಿಜೆಪಿ ಕಾರ್ಯಕರ್ತರು, ಜೆಡಿಎಸ್ ಮತ್ತು ಕಾಂಗ್ರೆಸ್ನವರು ಕೂಡ ನನಗೆ ಬೆಂಬಲ ನೀಡುತ್ತಿದ್ದಾರೆ. ಉಚ್ಚಾಟನೆಯ ಪತ್ರ ನನಗೆ ಇನ್ನೂ ತಲುಪಿಲ್ಲ. ಇದಕ್ಕೆಲ್ಲಾ ನಾನು ಹೆದರಲ್ಲ. ನಾಳೆಯಿಂದ ನನ್ನ ಪ್ರಚಾರ ಇನ್ನೂ ಬಿರುಸಾಗಿ ಮಾಡುವೆ ಎಂದು ಗುಡುಗಿದರು.
ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಕುಟುಂಬದ ಹಿಡಿತದಲ್ಲಿ ಸಿಲುಕಿರುವ ಬಿಜೆಪಿಯನ್ನು ಶುದ್ಧೀಕರಣ ಮಾಡಲು ನಾನು ಈ ಹೋರಾಟ ಮಾಡುತ್ತಿದ್ದೇನೆ. ಜನರು ನನ್ನನ್ನು ಬೆಂಬಲಿಸಿ, ಹೊಗಳುತ್ತಿದ್ದಾರೆ. ನಾನು ಸ್ಪರ್ಧೆ ಮಾಡಿರುವುದು ಸಾಕಷ್ಟು ಜನರಿಗೆ ಖುಷಿ ತಂದಿದೆ. ನನ್ನನ್ನು ಉಚ್ಚಾಟಿಸಿದ ಬಗ್ಗೆ ಯಡಿಯೂರಪ್ಪನವರು ಯಾವ ಮುಖ ಇಟ್ಟುಕೊಂಡು ಪ್ರತಿಕ್ರಿಯಿಸುತ್ತಾರೆ. ಅವರು ನನ್ನ ಕುರಿತು ಮಾತನಾಡಲ್ಲ ಎಂದು ಟೀಕಿಸಿದರು.










