ಬೆಂಗಳೂರು: ಕ್ರಿಕೆಟಿಗ ರಾಹುಲ್ ದ್ರಾವಿಡ್, ಇನ್ಫೊಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ಸುಧಾಮೂರ್ತಿ ಸೇರಿದಂತೆ ನಟ ಗಣೇಶ್ ದಂಪತಿ ಮತದಾನ ನಡೆಸಿದರು.
ಬೆಂಗಳೂರಿನಲ್ಲಿ ಮೊದಲಿಗರಾಗಿ ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕುಟುಂಬ ಸಮೇತ ಆಗಮಿಸಿ ಮಲ್ಲೇಶ್ವರಂ ಶಿಕ್ಷಾ ಸ್ಕೂಲ್ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಪತ್ನಿ ಮತ್ತು ಮಗನ ಜೊತೆ ಆಗಮಿಸಿದ ರಾಹುಲ್ ದ್ರಾವಿಡ್ ಮತ ಚಲಾಯಿಸಿದರು. ಬಳಿಕ ಮಾತನಾಡಿದ ಅವರು ‘ ದಯವಿಟ್ಟು ಎಲ್ಲರೂ ಮತದಾನ ಮಾಡಿ. ಪ್ರಜಾಪ್ರಭುತ್ವ ಮುಂದೆ ತರುವ ಅವಕಾಶ ಇದು. ಮತ ಚಲಾವಣೆ ನಮ್ಮ ಸಾಂವಿಧಾನಿಕ ಹಕ್ಕಾಗಿದ್ದು, ಹಕ್ಕು ಚಲಾಯಿಸಲು ಎಲ್ಲರೂ ಮನೆಯಿಂದ ಹೊರ ಬನ್ನಿ. ಮತದಾನಕ್ಕಾಗಿ ಚುನಾವಣಾ ಆಯೋಗ ಸಿದ್ಧತೆ, ವ್ಯವಸ್ಥೆಯನ್ನು ಉತ್ತಮವಾಗಿ ಮಾಡಿದೆ. ಹಾಗಾಗಿ ಯುವ ಜನತೆ ತಪ್ಪದೇ ಮತದಾನ ಮಾಡಿ ಎಂದು ಮನವಿ ಮಾಡಿದರು.
ಸುಧಾಮೂರ್ತಿ ಅವರು ಜಯನಗರ ಟಿ ಬ್ಲಾಕ್ ನ ಮತಗಟ್ಟೆಯಲ್ಲಿ ಮತದಾನ ನಡೆಸಿ ತಮ್ಮ ಮತ ಹಕ್ಕು ಚಲಾಯಿಸಿದರು. ಇದೇ ವೇಳೆ ಮಾತನಾಡಿದ ಸುಧಾಮೂರ್ತಿ, ಊರಿಗೆ ಹೋಗಬೇಕಿತ್ತು ಅದಕ್ಕೆ ಬೇಗ ಬಂದ್ವಿ. ಮತದಾನ ಶ್ರೇಷ್ಠದಾನ. ಎಲ್ಲರಿಗೂ ಹೇಳುತ್ತಿದ್ದೇನೆ ಮತದಾನ ಮಾಡಿ ಅಂತ ಮನವಿ ಮಾಡಿದರು. ಯುವ ಸಮೂಹ ಮತ ಹಾಕಲು ಮುಂದೆ ಬರಬೇಕು. ಮತದಾನ ಮಾಡಿ ಅಭಿಪ್ರಾಯ ತಿಳಿಸಬೇಕು. ಹೆಚ್ಚೆಚ್ಚು ಜನ ಮತದಾನ ಮಾಡಬೇಕು. ನಮ್ಮಂತಹ ಹಿರಿಯರು ಕ್ಯೂ ನಲ್ಲಿ ನಿಂತು ಮತದಾನ ಮಾಡ್ತಾರೆ. ಯುವಕರು ಕೂಡ ಮಾಡಬೇಕು ಎಂದು ಮನವಿ ಮಾಡಿದರು.
ಮತದಾನದ ಬಳಿಕ ಮಾತನಾಡಿದ ನಾರಾಯಣ ಮೂರ್ತಿ, ಬಹಳ ವಿಚಾರ ಮಾಡಿ, ಬಹಳ ಯೋಚನೆ ಮಾಡಿ.. ಇವತ್ತಿನ ಮತ ಚಲಾಯಿಸಬೇಕು ಎಲ್ಲರೂ ಮತದಾನ ಮಾಡಬೇಕು ಎಂದು ಕರೆ ನೀಡಿದರು.
ಇನ್ನು ನಟ ಗಣೇಶ್ ಹಾಗೂ ಪತ್ನಿ ಶಿಲ್ಪಾ ಗಣೇಶ್ ಆರ್ಆರ್ ನಗರದ ಮೌಂಟ್ ಕಾರ್ಮಲ್ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಮತದಾನದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಗಣೇಶ್, ‘ಮತ ಹಾಕೋದು ನನ್ನ ಜವಾಬ್ದಾರಿ. ನನ್ನ ಹಕ್ಕನ್ನು ಚಲಾಯಿಸಿದ್ದೀನಿ. ನಿಮಗೆ ಯಾರು ಒಳ್ಳೆಯವರು ಅನಿಸುತ್ತದೆಯೋ ಅವರಿಗೆ ವೋಟ್ ಮಾಡಿ. ಎಲ್ಲರೂ ವೋಟ್ ಹಾಕಿ. ಯಾವುದಾದರೂ ಕೆಲಸ ಆಗಿಲ್ಲ ಎಂದು ಕೇಳಬೇಕು ಎಂದರೆ ವೋಟ್ ಹಾಕಬೇಕು, ವೋಟ್ ಹಾಕಿ ಕೇಳಿದರೆ ಅದರ ಬೆಲೆ ಜಾಸ್ತಿ ಇರುತ್ತದೆ’ ಎಂದಿದ್ದಾರೆ.










