ಬಾಲ್ಯ ವಿವಾಹ ತಡೆದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಪೋಷಕರ ಮನವೊಲಿಸಿ ಬಾಲಕಿಯ ರಕ್ಷಣೆ…

54
firstsuddi

ಗದಗ: ಬಾಲ್ಯ ವಿವಾಹ ಅಪರಾಧ ಎಂದು ನಿರಂತರ ಜಾಗೃತಿ ಮಾಡಲಾಗುತ್ತಿದೆ. ಆದ್ರೆ, ಕಾನೂನು ಹಾಗೂ ಅಧಿಕಾರಿಗಳ ಕಣ್ಣು ತಪ್ಪಿಸಿ ಬಾಲ್ಯ ವಿವಾಹ ನಡೆಯುತ್ತಿವೆ. ನಿನ್ನೆ ಬಾಲ್ಯ ವಿವಾಹವೊಂದನ್ನು ಅಧಿಕಾರಿಗಳು ತಡೆದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ನಗರದ ಕರ್ನಾಟಕ ಭವನದಲ್ಲಿ ಗದಗ ತಾಲೂಕಿನ ಕೊಟುಮಚಗಿ ಗ್ರಾಮದ ಇಬ್ಬರು ಸಹೋದರರ ಮದುವೆ ನಿಶ್ಚಯ ಮಾಡಲಾಗಿತ್ತು. ಆದರೆ, ಕಿರಿಯ ಸಹೋದರನ ಮದುವೆ ಆಗುತ್ತಿರುವ ಬಾಲಕಿಗೆ ಇನ್ನೂ 18 ವರ್ಷ ಆಗಿರಲಿಲ್ಲ. ಆದರೂ ಕೂಡ ಪೋಷಕರು ಮದುವೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು.

ಮುಂಜಾನೆಯಿಂದ ಮದುವೆ ಕಾರ್ಯಗಳನ್ನು ಮುಗಿಸಿ, ಇನ್ನೇನು ಮಾಂಗಲ್ಯಧಾರಣೆ ಆಗಬೇಕು ಎನ್ನುವ ಸಮಯದಲ್ಲಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಪೊಲೀಸರು ಕಲ್ಯಾಣ ಮಂಟಪಕ್ಕೆ ಧಾವಿಸಿದ್ದಾರೆ. ಈ ವೇಳೆ ಬಾಲಕಿಯ ವಯಸ್ಸು, ವಿವರ ನೋಡಿದಾಗ 18 ವರ್ಷ ತುಂಬಲು ಇನ್ನೂ 15 ದಿನಗಳು ಬಾಕಿ ಇದ್ದವು. ಹೀಗಾಗಿ ಅಧಿಕಾರಿಗಳು ಮದುವೆಯನ್ನು ತಡೆದಿದ್ದಾರೆ. ಪೋಷಕರ ಮನವೊಲಿಸಿ, ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಮದುವೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಅಪ್ರಾಪ್ತ ಬಾಲಕಿಯನ್ನು ಮದುವೆ ಮಾಡುತ್ತಿದ್ದ ಪೋಷಕರು ಅನಕ್ಷರಸ್ಥರು, ಅವರಿಗೆ ಅಷ್ಟೊಂದು ಕಾನೂನು ಗೊತ್ತಿರಲಿಲ್ಲ. ಹೀಗಾಗಿ ಸಹೋದರನ ಜೊತೆ ಕಿರಿಯ ಸಹೋದರನ ಮದುವೆ ಮಾಡಿದ್ರೆ, ಹಣವು ಉಳಿಯುತ್ತೇ ಎನ್ನುವ ಲೆಕ್ಕಾಚಾರ ಹಾಕಿಕೊಂಡು ಎರಡು ಮದುವೆ ಮಾಡಲು ಮುಂದಾಗಿದ್ದರು. ಆದರೆ, ಕಿರಿಯ ಸಹೋದರ ಮದುವೆ ಆಗುವ ವಧು, ಬಾಲಕಿ ಆಗಿರೋದರಿಂದ ಮದುವೆ ಸ್ಟಾಪ್ ಮಾಡಲಾಗಿದೆ. ಮದುವೆ ಸಂಭ್ರಮದಲ್ಲಿದ್ದ ಕುಟುಂಬಸ್ಥರು ಹಾಗೂ ಬಂಧು ಬಳಗ ಕೆಲವು ಸಮಯ ವಿಚಲಿತರಾಗಿದ್ದರು. ಹಿರಿಯರು ಹಾಗೂ ಅಧಿಕಾರಿಗಳು ಸಮಾಲೋಚನೆ ಮಾಡಿ, ಹಿರಿಯ ಸಹೋದರನ ಮದುವೆಗೆ ಒಪ್ಪಿಗೆ ನೀಡಿದರು.