ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಚಿರತೆ ಓಡಾಟ, ಜನರಿಗೆ ಹೆಚ್ಚಿದ ಆತಂಕ.

41

ಬೆಂಗಳೂರು: ಮಂಗಳವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿಯ ಎನ್‍ಟಿಟಿಎಫ್ ಕಾಲೇಜು ಕಾಂಪೌಂಡ್ ಪಕ್ಕದಲ್ಲಿನ ರಸ್ತೆಯಲ್ಲಿ ಚಿರತೆ ರಸ್ತೆ ದಾಟುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಿರತೆ ರಸ್ತೆ ದಾಟುತ್ತಿರುವ ದೃಶ್ಯ ಟೋಲ್ ಫ್ಲಾಜಾ ಫೇಸ್ 1ರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಚಿರತೆ ಕಾಣಿಸಿಕೊಂಡಿದ್ದು ಇದೇ ಮೊದಲಲ್ಲ. ಎರಡು ವಾರಗಳ ಹಿಂದೆ ಬೆಂಗಳೂರಿನ ಜಿಗಣಿ ಪ್ರದೇಶದಲ್ಲಿ ಚಿರತೆ ಓಡಾಟ ಕಂಡುಬಂದಿತ್ತು. ಇದೇ ಚಿರತೆ ಮತ್ತೆ ಎಲೆಕ್ಟ್ರಾನಿಕ್ ಸಿಟಿಯಲ್ಲೂ ಕಂಡು ಬಂದಿದೆ ಎಂದು ಅಧಿಕಾರಿಗಳು ಮತ್ತು ಪೋಲೀಸರು ಶಂಕಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯ ಎನ್‍ಟಿಟಿಎಫ್ ಕಾಲೇಜಿನ ಪ್ರಾಂಶುಪಾಲ ಸುನೀಲ್ ಜೋಶಿ ಮಾತನಾಡಿ, ನಾವು ಎಲ್ಲ ಕೊಠಡಿಗಳು ಮತ್ತು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದೇವೆ. ಚಿರತೆಯ ಯಾವುದೇ ಕುರುಹು ಕಂಡುಬಂದಿಲ್ಲ. ಚಿರತೆ ಟೋಲ್‍ಗೇಟ್ ಬಳಿಯಿರುವ ಕ್ಯಾಮೆರಾದಲ್ಲಿ ಕಾಂಪೌಂಡ್ ಬಳಿ ಚಿರತೆ ಹಾದು ಹೋಗಿರುವ ದೃಶ್ಯ ಸೆರೆಯಾಗಿದೆ. ಕ್ಯಾಂಪಸ್‍ನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪರಿಶೀಲನೆ ನಡೆಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಬಂದು ಮರು ಪರಿಶೀಲನೆ ನಡೆಸಿದ್ದಾರೆ ಆದರೆ ಅದು ಎಲ್ಲಿ ಹೋಯಿತು ಎಂದು ನಮಗೆ ತಿಳಿದಿಲ್ಲ ಎಂದು ಹೇಳಿದರು.