ಯುವತಿಯರನ್ನು ಕರೆತಂದಿದ್ದನ್ನು ಪ್ರಶ್ನಿಸಿದ್ದಕ್ಕೆ ನಾನು ಡಿಸಿಪಿ ಮಗ ಎಂದು ಸೆಕ್ಯೂರಿಟಿ ಮೇಲೆ ಹಲ್ಲೆ.

50

ಬೆಂಗಳೂರು: ನಾನು ಡಿಸಿಪಿ ಮಗ, ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಸಂಬಂಧಿ ಅಂತಾ ಹೇಳಿ ಯುವಕನೋರ್ವ ಅಪಾರ್ಟ್‍ಮೆಂಟ್ ಸೆಕ್ಯೂರಿಟಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೆಕ್ಯೂರಿಟಿ ಗಾರ್ಡ್ ಪುನೀತ್ ಮೇಲೆ ಯುವಕ ವರುಣ್ (21) ಹಲ್ಲೆ ನಡೆಸಿದ್ದಾನೆ.
ಹಲ್ಲೆಗೊಳಗಾದ ಪುನೀತ್ ಅವರು ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ದೊಡ್ಡಬೆಲೆಯ ಪ್ರಾವಿಡೆಂಟ್ ಸನ್‍ವರ್ತ್ ಅಪಾರ್ಟ್‍ಮೆಂಟ್‍ಗೆ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿನ್ನೆ ತಡರಾತ್ರಿ 12 ಗಂಟೆ ಸುಮಾರಿಗೆ ಯುವಕ ವರುಣ್ ಅಪಾಟ್ಮೆರ್ಂಟ್‍ಗೆ ಇಬ್ಬರು ಯುವತಿಯರು ಹಾಗೂ ಓರ್ವ ಯುವಕನನ್ನು ಕರೆತಂದಿದ್ದ. ಯುವತಿಯರನ್ನು ಕರೆದುಕೊಂಡು ಬಂದ ಹಿನ್ನೆಲೆ ಅನುಮಾನಗೊಂಡ ಸೆಕ್ಯೂರಿಟಿ ಗಾರ್ಡ್ ಪುನೀತ್, ರಾತ್ರಿ 12 ಗಂಟೆ ನಂತರ ಅಪರಿಚಿತರಿಗೆ ಪ್ರವೇಶವಿಲ್ಲ ಎಂದು ಯುವಕನಿಗೆ ಖಡಕ್ ಆಗಿ ಹೇಳಿದ್ದಾರೆ.
ಇದರಿಂದ ಕೋಪಗೊಂಡ ವರುಣ್, ಹಲ್ಲೆ ನಡೆಸಿದ್ದಾನೆ. ನಾನು ಯಾರ್ ಗೊತ್ತಾ? ಡಿಸಿಪಿ ಮಗ. ಸಿಎಂ ಸಿದ್ದರಾಮಯ್ಯ ನನ್ನ ಸಂಬಂಧಿ ಎಂದು ಹೇಳಿ ವರುಣ್, ಪುನೀತ್ ಮೇಲೆ ಹಲ್ಲೆ ನಡೆಸಿದ್ದಾನೆ. ಇನ್ನು ಮತ್ತೊಂದೆಡೆ ಅಪಾಟ್ಮೆರ್ಂಟ್ ರೂಲ್ಸ್ ಪ್ರಕಾರ ನಡೆದರೂ ಹಲ್ಲೆ ಮಾಡಿದ್ದಾರೆ. ಕಿವಿ ಪರದೆ ಹರಿದು ಹೋಗುವ ಹಾಗೆ ಹಲ್ಲೆ ಮಾಡಲಾಗಿದೆ. ನನ್ನ ಕಿವಿ ಕೇಳಿಸುತ್ತಿಲ್ಲ ಎಂದು ಪುನೀತ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಮೇಲೆ ಕಪಾಳ ಮೋಕ್ಷ ಮಾಡುವ ವಿಡಿಯೋ ರಿಕಾರ್ಡ್ ಆಗಿದೆ. ಅಲ್ಲೇ ಇದ್ದ ಸ್ಥಳೀಯರು ಹಲ್ಲೆ ವಿಡಿಯೋ ರಿಕಾರ್ಡ್ ಮಾಡಿದ್ದಾರೆ. ಅಲ್ಲದೆ ವರುಣ್ ಯುವತಿಯರನ್ನು ಕರೆದುಕೊಂಡು ಬಂದ ದೃಶ್ಯಗಳು ಕೂಡ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿವೆ.