ಬೆಂಗಳೂರು: ನೋಡನೋಡುತ್ತಿದ್ದಂತೆಯೇ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಆಟದಲ್ಲಿ ಒಂದು ವಾರ ಕಳೆದಿದೆ. 7 ದಿನಗಳ ಕಾಲ ವಿವಿಧ ಟಾಸ್ಕ್‍ನಲ್ಲಿ ಗುದ್ದಾಡಿ ಎಲಿಮಿನೇಷನ್‍ನಿಂದ ಬಚಾವ್ ಆಗಲು ಎಲ್ಲರೂ ಪ್ರಯತ್ನಿಸಿದ್ದರು. ಜಗದೀಶ್, ಯಮುನಾ ಶ್ರೀನಿಧಿ, ಹಂಸಾ, ಭವ್ಯಾ, ಗೌತಮಿ, ಚೈತ್ರಾ ಕುಂದಾಪುರ, ಶಿಶಿರ್, ಮಾನಸಾ ಮತ್ತು ಮೋಕ್ಷಿತಾ ಅವರು ಈ ವಾರ ನಾಮಿನೇಟ್ ಆಗಿದ್ದರು. ಅಂತಿಮವಾಗಿ ಯಮುನಾ ಶ್ರೀನಿಧಿ ಅವರು ಎಲಿಮಿನೇಟ್ ಆಗಿದ್ದಾರೆ. ಇದರಿಂದ ಅವರಿಗೆ ಶಾಕ್ ಆಗಿದೆ. ಅವರು ಮೊದಲ ವಾರ ಹೆಚ್ಚು ಆ್ಯಕ್ಟೀವ್ ಆಗಿದ್ದರೂ ಕೂಡ ಎಲಿಮಿನೇಷನ್ ಆಗುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಯಮುನಾ ಶ್ರೀನಿಧಿ ಅವರು ಮೊದಲ ದಿನದಿಂದಲೂ ಆ್ಯಕ್ಟೀವ್ ಆಗಿದ್ದರು. ಬಿಗ್ ಬಾಸ್ ಮನೆಗೆ ಕಾಲಿಟ್ಟ ಕೆಲವೇ ಕ್ಷಣಗಳ ಬಳಿಕ ಅವರು ಗೋಲ್ಡ್ ಸುರೇಶ್ ಬಳಿ ವಾದಕ್ಕೆ ಇಳಿದಿದ್ದರು. ಅಲ್ಲದೇ ಜಗದೀಶ್ ಅವರು ಹಲವು ಬಾರಿ ನಿಯಮಗಳನ್ನು ಮುರಿದಾಗ ನೇರವಾಗಿ ವಿರೋಧಿಸಿದ್ದರು. ಇಷ್ಟೆಲ್ಲ ಆ್ಯಕ್ಟೀವ್ ಆಗಿದ್ದರೂ ಸಹ ಅವರ ಆಟ ಒಂದೇ ವಾರದಲ್ಲಿ ಅಂತ್ಯವಾಗಿದೆ. ಯಮುನಾ ಶ್ರೀನಿಧಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುವಾಗ ಐಶ್ವರ್ಯಾ ಭಾವುಕವಾಗಿ ಕಣ್ಣೀರು ಹಾಕಿದರು. ಬಳಿಕ ವೇದಿಕೆಗೆ ಬಂದ ಯಮುನಾ ಅವರು ಸುದೀಪ್ ಜತೆ ಎಲಿಮಿನೇಷನ್ ಬಗ್ಗೆ ಮಾತನಾಡಿದರು. ‘ಇದನ್ನು ನಾನು ನಿರೀಕ್ಷಿಸಿರಲ್ಲ, ಇನ್ನಷ್ಟು ದಿನ ಇರುವಷ್ಟು ಸಾಮಥ್ರ್ಯ ನನ್ನಲ್ಲಿ ಇತ್ತು ಅನಿಸುತ್ತೆ. ಶಿಶಿರ್, ಧರ್ಮ, ತ್ರಿವಿಕ್ರಮ್ ಅವರು ಟಾಪ್ 3 ಸ್ಪರ್ಧಿಗಳಾಗಿರುತ್ತಾರೆ’ ಎಂದು ಹೇಳಿ ಬಿಗ್ ಬಾಸ್ ಆಟಕ್ಕೆ ಯಮುನಾ ವಿದಾಯ ಹೇಳಿದರು. ಒಂದೇ ವಾರಕ್ಕೆ ಬಿಗ್ ಬಾಸ್ ಆಟ ಅಂತ್ಯಗೊಳಿಸಿದ ಯಮುನಾ ಶ್ರೀನಿಧಿ ಅವರಿಗೆ 1 ಲಕ್ಷ ರೂಪಾಯಿ ಚೆಕ್ ನೀಡಲಾಯಿತು. ಮೊದಲ ವಾರದ ಎಲಿಮಿನೇಷನ್ ಬಳಿಕ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಪೈಪೋಟಿ ಹೆಚ್ಚಾಗಿದೆ. ನರಕದಲ್ಲಿ ಇದ್ದ ರಂಜಿತ್ ಅವರಿಗೆ ಸ್ವರ್ಗಕ್ಕೆ ಎಂಟ್ರಿ ಸಿಕ್ಕಿದೆ. ಇಷ್ಟು ದಿನ ಸ್ವರ್ಗದಲ್ಲಿ ಹಾರಾಡುತ್ತಿದ್ದ ಜಗದೀಶ್ ಅವರನ್ನು ನರಕಕ್ಕೆ ಕಳಿಸಲಾಗಿದೆ. ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆಗಿ ಹಂಸಾ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.










