ಮುಖ್ಯಮಂತ್ರಿ ಬದಲಾವಣೆ ಇಲ್ಲ, ನಾನು 2028 ಕ್ಕೆ ಸಿಎಂ ಆಕಾಂಕ್ಷಿ: ಸಚಿವ ಸತೀಶ್ ಜಾರಕಿಹೊಳಿ.

30

ಹಾಸನ: “ಮುಖ್ಯಮಂತ್ರಿ ಬದಲಾವಣೆ ಇಲ್ಲ, ಸಿಎಂ ಬದಲಾವಣೆ ಕೇವಲ ಊಹಾಪೋಹ ” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಸ್ವತಃ ಹೈಕಮಾಂಡ್ ಹೇಳಿದ್ದು, ಸಿದ್ದರಾಮಯ್ಯ ಅವರ ಬದಲಾವಣೆ ಯಾವುದೇ ಕಾರಣಕ್ಕೂ ಆಗಲ್ಲ. ಅದು ಕೇವಲ ಊಹಾಪೋಹ. ಸಿಎಂ ಬದಲಾವಣೆ ಚರ್ಚೆ ಏನೇ ಇದ್ದರೂ, ಅದು ಸದ್ಯಕ್ಕೆ ಇಲ್ಲ. ಯಾರು ಏನೇ ಹೇಳಿದರೂ ಸಿಎಂ ಬದಲಾವಣೆ ಚರ್ಚೆ ಪಕ್ಷದೊಳಗೆ ನಡೆದಿಲ್ಲ. ಹಾಗಾಗಿ ಆ ಪ್ರಶ್ನೆ ಉದ್ಭವಿಸದು. ಸಿಎಂ ಹಾಲಿ ಇದ್ದಾರೆ. ನಾನು 2028ಕ್ಕೆ ಸಿಎಂ ಆಗಬೇಕೆಂಬ ಬಯಕೆ ಹೊಂದಿದ್ದೇನೆ. ಅದೇ ಕಾರಣಕ್ಕೆ ನನ್ನ ಮಗಳೂ ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅಲ್ಲಿಯವರೆಗೂ ಕಾಯೋಣ” ಎಂದು ಊಹಾಪೋಹಕ್ಕೆ ತೆರೆ ಎಳೆದರು. “ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂಬ ಹೊರಗಿನ ಚರ್ಚೆಗೆ ನಾನು ಉತ್ತರಿಸುವುದಿಲ್ಲ. ನನ್ನ ಹಲವು ಹಿತೈಷಿಗಳು ನಾನೇ ಸಿಎಂ ಎಂದು ಹೇಳಿದ್ದರೂ, ಅದು ಸಿಎಂ ಸಿದ್ದರಾಮಯ್ಯ ಅವರ ಅವಧಿ ಮುಗಿದ ಮೇಲೆ ಅಷ್ಟೇ. ನಾನು ಮುಂದೆ ಸಿಎಂ ಆದರೆ ಅದು ಸಿದ್ದರಾಮಯ್ಯ ಅವರ ಸಹಕಾರದಿಂದಲೇ ಆಗುತ್ತೇನೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ವಿಚಾರವಾಗಿ ಕೆಬಿ ಕೋಳಿವಾಡ ಅವರು ನೀಡಿರುವ ಹೇಳಿಕೆ ಅವರ ವೈಯಕ್ತಿಕ”. ರಾಜ್ಯದಲ್ಲಿ ಜಾತಿ-ಗಣತಿ ವರದಿ ಜಾರಿ ವಿಚಾರದಲ್ಲಿ ಬೇಕು-ಬೇಡ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಸಚಿವ ಸಂಪುಟದಲ್ಲಿ ಇದು ಚರ್ಚೆಗೆ ಬಂದಿಲ್ಲ. ಬಂದ ಮೇಲೆ ನೋಡೋಣ ಎಂದರು. ಜೊತೆಗೆ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಆಗಬೇಕು ಎಂಬ ಕೂಗಿದೆ. ಈ ಸಂಬಂಧ ಪ್ರತಿಭಟನೆ ನಡೆಯುತ್ತಿದೆ. ಚುನಾವಣಾ ಪ್ರಣಾಳಿಕೆಯಲ್ಲೇ ಜಾರಿ ಮಾಡುವ ಭರವಸೆ ನೀಡಿದ್ದು, ಅದನ್ನು ಮಾಡುತ್ತೇವೆ ಎಂದು ಸಚಿವರು ಹೇಳಿದರು. ಬಳಿಕ, “ಮೈಸೂರು ಲೋಕಾಯುಕ್ತದಲ್ಲಿ ನಡೆಯುತ್ತಿರುವ ತನಿಖೆಗೆ ಸಿಎಂ ಅವರು ಎಲ್ಲಾ ರೀತಿಯ ಸಹಕಾರ ನೀಡಲಿದ್ದಾರೆ. ಅದರಲ್ಲಿ ಯಾವುದೇ ಮುಜುಗರದ ಪ್ರಶ್ನೆ ಇಲ್ಲ. ಸಿಎಂ ರಾಜೀನಾಮೆ ಕೊಡುತ್ತಾರಾ ಎಂದು ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿಯ ಹಲವು ನಾಯಕರ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಆರೋಪ ಇದೆ” ಎಂದು ಸಚಿವರು ಹೇಳಿದರು.