ಬೆಂಗಳೂರು: ಪಾಲಿಕೆ ಹೊರಡಿಸಿದ್ದ ಮಾರ್ಗಸೂಚಿಗಳನ್ನು ಪಾಲಿಸದ ನಗರದ 21 ಪೇಯಿಂಗ್ ಗೆಸ್ಟ್ ಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಂದ್ ಮಾಡಿಸಿದೆ. ಆರೋಗ್ಯ ಮತ್ತು ಕಲ್ಯಾಣ ಇಲಾಖೆಯ ಬಿಬಿಎಂಪಿ ವಿಶೇಷ ಆಯುಕ್ತ ಸುರಳಕರ್ ವಿಕಾಸ್ ಕಿಶೋರ್ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ 2,193 ಅಧಿಕೃತ ಪಿಜಿಗಳಿವೆ. ಈ ಪೈಕಿ 1,578 ಪಿಜಿಗಳು ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದು, 615 ಪಿಜಿಗಳು ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ. ಮಾರ್ಗಸೂಚಿ ಪಾಲಿಸದವರಿಗೆ ನೋಟಿಸ್ ಜಾರಿ ಮಾಡಲಾಗುತ್ತಿದ್ದು, ನಿಯಮ ಪಾಲಿಸದ ಪಿಜಿಗಳ ಸೀಲ್ ಮಾಡಲಾಗುತ್ತಿದೆ ಎಂದು ಹೇಳಿದರು. ಬಿಬಿಎಂಪಿಯಿಂದ ಉದ್ದಿಮೆ ಪರವಾನಿಗೆ ಪಡೆಯದೆ ಅನಧಿಕೃತವಾಗಿ ನಡೆಸುತ್ತಿರುವ ಹಾಗೂ ಮಾರ್ಗಸೂಚಿ ಪಾಲಿಸದ ಪಿ.ಜಿ.ಗಳಿಗೆ 2-3 ಬಾರಿ ನೋಟೀಸ್ ನೀಡಲಾಗಿದೆ. ಇದಕ್ಕೆ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಈ ಸಂಬಂಧ ಪಿಜಿಗಳನ್ನು ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 305 ಹಾಗೂ 308 ರಡಿಯಲ್ಲಿ ತಕ್ಷಣದಿಂದ ಮುಚ್ಚುವ ಕೆಲಸ ಮಾಡಲಾಗುತ್ತಿದೆ. ಅದರಂತೆ 1 ಅಧಿಕೃತ ಪಿಜಿ ಹಾಗೂ 20 ಅನಧಿಕೃತ ಸೇರಿ 21 ಪಿಜಿಗಳು ಮಾರ್ಗಸೂಚಿ ಅನುಸರಿಸದ ಕಾರಣ ಮುಚ್ಚಲಾಗಿದೆ ಎಂದು ತಿಳಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 2320 ಅನಧಿಕೃತ ಪಿ.ಜಿ.ಗಳಿವೆ. ಇವುಗಳಲ್ಲಿ 1674 ಪಿ.ಜಿ.ಗಳು ಮಾರ್ಗಸೂಚಿಗಳಲ್ಲಿ ಸೂಚಿಸಿರುವ ಅಂಶಗಳನ್ನು ಪಾಲಿಸುತ್ತಿವೆ. ಆದರೆ, 646 ಪಿ.ಜಿ.ಗಳು ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ. ಮಾರ್ಗಸೂಚಿಗಳನ್ನು ಅನುಸರಿಸದ ಪಿ.ಜಿ.ಗಳನ್ನು ಸೇರಿಸಿದಂತೆ ಇಲ್ಲಿಯವರೆಗೆ 2320 ಅಧಿಕೃತ ಪಿ.ಜಿಗಳಿಗೆ ನೋಟೀಸ್ ಬಿಸಿ ಮುಟ್ಟಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಪಾಲಿಕೆಯ ಎಲ್ಲಾ ಎಂಟು ವಲಯಗಳಲ್ಲಿ, ಆರೋಗ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ, ಎಲ್ಲಾ ಅಧಿಕಾರಿಗಳು ಅನಧಿಕೃತ ಪಿಜಿಗಳಿಗೆ ಭೇಟಿ ನೀಡುವಂತೆ ಹಬಾಗೂ ಮಾರ್ಗಸೂಚಿಗಳನ್ನು ಅನುಸರಿಸದ ಪಿಜಿಗಳ ಬಂದ್ ಮಾಡಿಸುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.










