ಆಯುಧ ಪೂಜೆಯಂದೇ ರಾಜಮನೆತನಕ್ಕೆ ಮತ್ತೊಂದು ಸಿಹಿ ಸುದ್ದಿ; ತ್ರಿಷಿಕಾ ಕುಮಾರಿಗೆ ಗಂಡು ಮಗು ಜನನ.

19

ಮೈಸೂರು: ಮೈಸೂರಿನ ರಾಜಮನೆತನಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು, ತ್ರಿಷಿಕಾ ಕುಮಾರಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಯುಧ ಪೂಜೆ ದಿನದಂದೇ ಯದುವೀರ್ ಒಡೆಯರ್ ಗೆ ಸಿಹಿಸುದ್ದಿ ಸಿಕ್ಕಿದ್ದು, ಎರಡನೇ ಮಗುವಿಗೆ ಯದುವೀರ್ ತಂದೆಯಾಗಿದ್ದಾರೆ. ಮುದ್ದು ಮಗುವಿನ ಆಗಮನ ಅರಮನೆಯಲ್ಲಿ ದಸರಾ ಸಂಭ್ರಮವನ್ನು ಡಬಲ್ ಮಾಡಿದೆ. ಸಾಂಸ್ಕೃತಿಕ ನಗರಿ, ಅರಮನೆ ನಗರಿ ಮೈಸೂರಿನಲ್ಲಿ ದಸರಾ ಹಬ್ಬ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ. ಅರಮನೆಯಲ್ಲಿ ರಾಜರಿಂದ ಖಾಸಗಿ ದರ್ಬಾರ್ ಕೂಡ ನಡೆಸಲಾಗಿತ್ತು. ಮೈಸೂರಿನ ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರನ್ನು ನಡೆಸಿಕೊಟ್ಟಿದ್ದರು. ಈ ವೇಳೆ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ತ್ರಿಷಿಕಾ ಕುಮಾರಿ ಅವರು ತಮ್ಮ ಹೊಟ್ಟೆಯನ್ನು ಕವರ್ ಮಾಡಿಕೊಂಡಿದ್ದರು. ಇದರೊಂದಿಗೆ ಅವರು ಮತ್ತೆ ಗರ್ಭಿಣಿಯಾಗಿದ್ದಾರೆ ಎಂಬುದು ತಿಳಿದು ಬಂದಿತ್ತು. ಇನ್ನು, ಯದುವೀರ್ ಅವರಿಗೆ ತ್ರಿಷಿಕಾ ಕುಮಾರಿ ದಂಪತಿಗೆ ಈಗಾಗಲೇ ಒಂದು ಗಂಡು ಮಗು ಇದ್ದು, ಹಬ್ಬದ ದಿನವೇ ಈಗ ಈ ದಂಪತಿ ಮತ್ತೊಂದು ಮಗುವನ್ನು ಬರಮಾಡಿಕೊಂಡಿದೆ. ಮೈಸೂರಿನ ಇತಿಹಾಸದ ಪ್ರಕಾರ, ಮಹಾರಾಜರಿಗೆ ಅಲುಮೇಲಮ್ಮ ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ, ಮೈಸೂರು ಮಹಾರಾಜರಿಗೆ ಮಕ್ಕಳಾಗದಿರಲಿ ಎಂಬ ಶಾಪವನ್ನು ನೀಡಿರುತ್ತಾಳೆ. ಅದರಂತೆಯೇ ಮೈಸೂರು ಮಹಾರಾಜರಿಗೆ ಮಕ್ಕಳಾಗದೆ ದತ್ತು ಮಕ್ಕಳನ್ನು ಪಡೆದು ರಾಜರು ಪಟ್ಟಾಭಿಷೇಕವನ್ನು ಮಾಡಿಸಿರುವುದನ್ನು ನಾವು ನೋಡಿರುತ್ತೇವೆ. ಕೃಷ್ಣದತ್ತ ಒಡೆಯರ್ ಮೈಸೂರು ಮಹಾರಾಜರಾದ ಯದುವೀರ್ ಕೃಷ್ಣದತ್ತ ಒಡೆಯರ್ ಅವರನ್ನು ದತ್ತು ಪಡೆದಿದ್ದರು. ಅಲಮೇಲಮ್ಮನ ಶಾಪ ನಿವಾರಣೆಗಾಗಿ ಮೈಸೂರು ಮಹಾರಾಜರು ಚಿನ್ನದ ಮೂರ್ತಿಯನ್ನು ಮಾಡಿ ಅದಕ್ಕೆ ನವರಾತ್ರಿ ಹಬ್ಬದಲ್ಲಿ ಪೂಜೆಯನ್ನು ಸಲ್ಲಿಸುತ್ತಿರುವ ಪದ್ಧತಿಯನ್ನು ಸಹ ಇನ್ನೂ ಮುಂದುವರಿಸಿಕೊಂಡು ಬಂದಿದ್ದಾರೆ. ತ್ರಿಷಿಕಾ ಕುಮಾರಿಯವರು ಇನ್ನೊಂದು ಮಗುವಿಗೆ ಜನ್ಮ ನೀಡಿರುವುದು ನೋಡಿದರೆ ಅಲುಮೇಲಮ್ಮನ ಶಾಪ ನಿವಾರಣೆಯಾಗಿದೆ ಎಂಬ ರೀತಿಯಲ್ಲಿ ಕಾಣುತ್ತಿದೆ. ಇದಕ್ಕೆ ಕಾರಣವೇನೆಂದರೆ ಮೈಸೂರು ಮಹಾರಾಜರಿಗೆ ಎರಡು ಮಕ್ಕಳಾಗದಿರುವುದು. ಆದರೆ ಇದೀಗ ಎರಡನೇ ಗಂಡು ಮಗುವಿನ ಜನನದ ಮೂಲಕ ಅಲಮೇಲಮ್ಮನ ಶಾಪ ನಿವಾರಣೆಯಾಗಿದೆ ಎಂದು ಹೇಳಲಾಗುತ್ತಿದೆ.