ಮಂಡ್ಯ: ವ್ಯವಸಾಯ ಮಾಡಿ ಜೀವನ ನಡೆಸುತ್ತಿರುವ ಕೃಷಿಕರ ಸಮಸ್ಯೆಗಳನ್ನು ಪರಿಹಾರ ಮಾಡಲು ರೈತರಿಂದಲೇ ರೈತರಿಗಾಗಿ ‘ರೈತರ ಶಾಲೆ’ಯೊಂದನ್ನು ಪ್ರಾರಂಭಿಸಲು ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮದಲ್ಲಿ ಶಿಕ್ಷಕರೊಬ್ಬರು ಮುಂದಾಗಿದ್ದಾರೆ. ಈ ಶಿಕ್ಷಕರಿಗೆ ಕೃಷಿ ಕುಟುಂಬಗಳ ಹಿನ್ನೆಲೆಯುಳ್ಳ ಶಿಕ್ಷಕರ ಗುಂಪು ಬೆಂಬಲ ನೀಡಲು ಮುಂದಾಗಿದೆ. ಕೃಷಿ ವ್ಯವಸಾಯ ಮಾಡುವವರನ್ನು ಮತ್ತು ವ್ಯವಸಾಯವನ್ನು ವೃತ್ತಿಯಾಗಿ ಅಥವಾ ಹವ್ಯಾಸವಾಗಿ ಮಾಡಿಕೊಳ್ಳಲು ಉತ್ಸಾಹ ಹೊಂದಿರುವವರನ್ನು ಉತ್ತೇಜಿಸುವುದು ಈ ‘ರೈತ ಶಾಲೆ’ಯ ಉದ್ದೇಶವಾಗಿದೆ.
ಹಿಂದಿನ ವರ್ಷದ ಬರ ಪರಿಸ್ಥಿತಿ, ಕೋವಿಡ್ 19 ಸಾಂಕ್ರಾಮಿಕದ ಸಮಯದಲ್ಲಿ ರೈತರು ಎದುರಿಸಿದ ಕಷ್ಟಗಳು, ಇತ್ತಿಚೆಗೆ ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳು, ರೈತರ ವಿವಿಧ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಶಾಲೆಯನ್ನು ತೆರೆಯಲು ಮಂಡ್ಯದ ಉಪನ್ಯಾಸಕ ಸತ್ಯಮೂರ್ತಿ ಅವರ ನೇತೃತ್ವದಲ್ಲಿ ಏಳು ಸದಸ್ಯರ ತಂಡ ತೀರ್ಮಾನಿಸಿದೆ. ವ್ಯವಸಾಯವನ್ನು ಲಾಭದಾಯಕವಾಗಿಸುವುದು ಮತ್ತು ರೈತರನ್ನು ಎಲ್ಲಾ ವಿಚಾರಗಳಲ್ಲಿಯೂ ಸ್ವತಂತ್ರರನ್ನಾಗಿ ಮಾಡುವುದು ತಂಡದ ಹಾಗೂ ರೈತ ಶಾಲೆಯ ಪ್ರಮುಖ ಉದ್ದೇಶವಾಗಿದೆ. ಯುವಕರು ಉದ್ಯೋಗ ಅರಸಿ ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುವುದನ್ನು ತಡೆಯಲು ಮತ್ತು ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡುವುದನ್ನು ತಡೆಯುವ ಮಾರ್ಗವಾಗಿ ಈ ಶಿಕ್ಷಕ ತಂಡಗಳು ಕಾರ್ಯ ನಿರ್ವಹಿಸುತ್ತವೆ. ಶಿಕ್ಷಕರ ತಂಡವು ಈಗಾಗಲೇ 200ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಕೇಳಿ ತಿಳಿದುಕೊಂಡಿದೆ. ರೈತರಿಗೆ ಶಿಕ್ಷಣ ನೀಡುವುದರ ಜೊತೆಗೆ, ತರಬೇತಿ ಶಿಬಿರಗಳು, ಕ್ಷೇತ್ರ ಭೇಟಿಗಳು ಮತ್ತು ತಜ್ಞರಿಂದ ‘ರೈತರ ಶಾಲೆ’ಯಲ್ಲಿ ವಿಚಾರ ಮಂಡನೆ ಕಾರ್ಯಕ್ರಮಗಳನ್ನು ಆಯೋಜಿಸಲು ಈ ತಂಡವು ನಿರ್ಧರಿಸಿದೆ.
ರೈತರು ಕೃಷಿ ಸಲಹೆಗಳನ್ನು ಪಡೆಯಲು ಶಾಲೆಗೆ ಬರಲು ಮುಕ್ತ ಅವಕಾಶವಿದೆ. ನಾವು ಕೃಷಿಯಲ್ಲಿ ಉತ್ಸುಕರಾಗಿರುವ ಕೃಷಿಕರಿಗೂ ಹಾಗೂ ಯುವಕರಿಗೂ, ಮಾರ್ಗದರ್ಶನ ನೀಡುತ್ತೇವೆ ಎಂದು ತಂಡದ ರೂವಾರಿಯಾದ ಶಿಕ್ಷಕ ಸತ್ಯಮೂರ್ತಿ ತಿಳಿಸಿದ್ದಾರೆ. ಈಗಾಗಲೇ ಸುಮಾರು 500ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬಿತ್ತನೆ ಬೀಜಗಳ ವಿತರಣೆ ಮಾಡಿದ್ದೇವೆ ಎಂದು ತಂಡದ ಮತ್ತೊಬ್ಬ ಉಪನ್ಯಾಸಕ ಪ್ರದೀಪ್ ಕುಮಾರ್ ತಿಳಿಸಿದ್ದಾರೆ. ರೈತರು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗಿರುವುದರಿಂದ ಆಲಕೆರೆ ಮತ್ತು ಕೀಲಾರ ಗ್ರಾಮಗಳಲ್ಲಿ ಅನೇಕ ಮನೆಗಳಿಗೆ ಬೀಗ ಹಾಕಲಾಗಿದೆ. ಗ್ರಾಮವಾಸಿಗಳು ಮರಳಿ ಬಂದು ಕೃಷಿಯನ್ನು ಮತ್ತೆ ಆರಂಭಿಸಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.










