ಕೆಂಗೇರಿ ಕೆರೆಯಲ್ಲಿ ಮುಳುಗಿದ ಮಕ್ಕಳ ಸಾವು, ಅಣ್ಣನ ಮೃತದೇಹ ಪತ್ತೆ! ತಂಗಿಯ ಮೃತದೇಹಕ್ಕಾಗಿ ಮುಂದುವರೆದ ಕಾರ್ಯಾಚರಣೆ.

26

ಬೆಂಗಳೂರು: ಬೆಂಗಳೂರು ನಗರದ ಕೆಂಗೇರಿ ಕೆರೆಯಲ್ಲಿ ಇಬ್ಬರು ಮಕ್ಕಳು ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದ್ದು, ಈ ಘಟನೆಯ ಪೈಕಿ ಇಂದು ಒಂದು ಮೃತದೇಹ ಪತ್ತೆಯಾಗಿದೆ. ಇನ್ನೊಂದು ಮೃತದೇಹಕ್ಕಾಗಿ ಕಾರ್ಯಾಚರಣೆ ಮುಂದುವರೆದಿದೆ. ಸೋಮವಾರ ಸಂಜೆ ಈ ದುರ್ಘಟನೆ ನಡೆದಿದ್ದು, ಮೃತ ಮಕ್ಕಳನ್ನ ಜಾನ್ ಸೀನಾ (15) ಮತ್ತು ಮಹಾಲಕ್ಷ್ಮಿ (13) ಎಂದು ಗುರುತಿಸಲಾಗಿದೆ. ಬಿಬಿಎಂಪಿಯಲ್ಲಿ ಪೌರಕಾರ್ಮಿಕರಾಗಿರುವ ಮೃತ ಮಕ್ಕಳ ತಾಯಿ, ಇತ್ತೀಚೆಗಷ್ಟೇ ಕೆಂಗೇರಿ ಸಮೀಪದ ಹರ್ಷ ಲೇಔಟ್ ಗೆ ಬಂದು ನೆಲೆಸಿದ್ದರು. ಎಂದಿನಂತೆ ಮಕ್ಕಳ ತಾಯಿ ಕೆಲಸದ ನಿಮಿತ್ತ ಹೊರ ಹೋಗಿದ್ದರು. ಸಂಜೆ 5:30ರ ಸಮಯದಲ್ಲಿ ನೀರು ತರಲು ಬಂದಿದ್ದ ಅಣ್ಣ-ತಂಗಿ ಕಾಲು ಜಾರಿ ಇಬ್ಬರು ಆಯತಪ್ಪಿ ಕೆರೆಗೆ ಬಿದ್ದಿದ್ದಾರೆ. ಮಕ್ಕಳನ್ನು ಹುಡುಕಿಕೊಂಡು ಬಂದ ತಾಯಿ ನಾಗಮ್ಮ ಅವರಿಗೆ ಮಗನ ಅಂಗಿ ಹಾಗೂ ಬಿಂದಿಗೆ ಪತ್ತೆಯಾಗಿದೆ.
ಈದನ್ನು ನೋಡಿದ ಕೂಡಲೇ ನಾಗಮ್ಮ ಸ್ಥಳೀಯರಿಗೆ ಮಾಹಿತಿ ತಿಳಿಸಿದ್ದಾರೆ, ಬಳಿಕ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿದ್ದಾರೆ. ಕೆಂಗೇರಿ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ರಾತ್ರಿಯವರೆಗೂ ಶವ ಪತ್ತೆಯಾಗಲಿಲ್ಲ. ಮಳೆ ಕಾರಣ ಮುಂಜಾನೆಯಿಂದ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಕೆಂಗೇರಿ ಸಿಪಿಐ ಸಂಜೀವ್ ಗೌಡ ಹೇಳಿದ್ದರು ನಂತರ ಇಂದು ಬೆಳಗ್ಗೆ ಮತ್ತೆ ಶೋಧ ಕಾರ್ಯಾಚರಣೆ ಮುಂದುವರೆಸಿದ ಅಗ್ನಿಶಾಮಕ ದಳ ಸಿಬ್ಬಂದಿಗೆ ಒಂದು ಮಗುವಿನ ಮೃತ ದೇಹ ಪತ್ತೆಯಾಗಿದ್ದು, ಇದು ಬಾಲಕಿ ಅಣ್ಣ ಜಾನ್ ಸೀನಾ ನ ದೇಹ ಎನ್ನಲಾಗಿದೆ. ಮಹಾಲಕ್ಷ್ಮಿ ಮೃತದೇಹಕ್ಕಾಗಿ ಇನ್ನೂ ಶೋಧ ಕಾರ್ಯಾಚರಣೆ ಮುಂದುವರೆದಿದೆ.