ಹಾವೇರಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಗಳಾಗಿ ಉಮೇದುವಾರಿ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಯಾಸಿರ್ ಅಹಮದ್ ಖಾನ್ ಪಠಾಣ್ ಇಂದು ಬೆಳಗ್ಗೆ ನಾಮಪತೆ ಸಲ್ಲಿಸಲಿದ್ದು, ಹಾಗೂ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಇಂದು ಮಧ್ಯಾಹ್ನ ನಾಮಪತ್ರ ಸಲ್ಲಿಸಲಿದ್ದಾರೆ.
ಇಂದು ಬೆಳಗ್ಗೆ 10.30ರ ಸಮಯಕ್ಕೆ ಯಾಸೀರ್ ಖಾನ್ ಪಠಾಣ್ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಸರಳವಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಬಳಿಕ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ತೆರಳಿ ಮೆರವಣಿಗೆ ನಡೆಸುವುದರ ಮೂಲಕ ನಾಮಪತ್ರ ಸಲ್ಲಿಸಲಿದ್ದಾರೆ, ಇದಾದ ನಂತರ ಇಂದು ಮಧ್ಯಾಹ್ನ 1 ಗಂಟೆಗೆ ಅದ್ದೂರಿ ರ್ಯಾಲಿ ನಡೆಸಲಿರುವ ಯಾಸೀರ್ ಖಾನ್ ಪಠಾಣ್ಗೆ ಡಿಸಿಎಂ ಡಿಕೆ.ಶಿವಕುಮಾರ್, ಸಚಿವರಾದ ಈಶ್ವರ್ ಖಂಡ್ರೆ, ಶಿವಾನಂದ ಪಾಟೀಲ್, ಹೆಚ್.ಕೆ. ಪಾಟೀಲ್ರಿವರಿಗೆ ಸಾಥ್ ನೀಡಲಿದ್ದಾರೆ.
ಇನ್ನು ಶಿಗ್ಗಾವಿ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಈಗಾಗಲೇ ಸರಳವಾಗಿ ನಾಮಪತ್ರ ಸಲ್ಲಿಸಿರುವ ಭರತ್ ಬೊಮ್ಮಾಯಿ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೃಹತ್ ರೋಡ್ ಶೋ ನಡೆಸುವ ಮೂಲಕ ಅದ್ಧೂರಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್, ಸಿ.ಸಿ ಪಾಟೀಲ್, ಮುರುಗೇಶ್ ನಿರಾಣಿ ಸೇರಿದಂತೆ ಹಲವು ಬಿಜೆಪಿ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
ಇಂದು ಶಿಗ್ಗಾಂವಿ ಉಪಚುನಾವಣೆಗೆ ಅಭ್ಯರ್ಥಿಯಾದ ಭರತ್ ಬೊಮ್ಮಾಯಿ ಶಿಗ್ಗಾಂವಿಯ ದ್ಯಾಮವ್ವನ ಪಾದಗಟ್ಟಿಯಿಂದ ಪಾದಯಾತ್ರೆ ಆರಂಭಿಸಿ ಹಳೇಪೇಟೆ ಮಾರ್ಗವಾಗಿ ಗಂಗೀಬಾವಿ ಕ್ರಾಸ್ವರೆಗೆ ಪಾದಯಾತ್ರೆ ನಡೆಸುವ ಭರತ್ ಬೊಮ್ಮಾಯಿ ಬಳಿಕ ಚೆನ್ನಮ್ಮ ಸರ್ಕಲ್ ಮಾರ್ಗವಾಗಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಚೆನ್ನಮ್ಮ ಸರ್ಕಲ್ನಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದ್ದು, ಪ್ರಮುಖ ಬಿಜೆಪಿ ನಾಯಕರು ಭರತ್ ಬೊಮ್ಮಾಯಿ ಪರ ಮತಯಾಚನೆ ಮಾಡಲಿದ್ದಾರೆ.










