ಕೊಡಗು: ಹೈದರಬಾದ್ ನಲ್ಲಿ ತನ್ನ ಪ್ರಿಯಕರನೊಂದಿಗೆ ಸೇರಿ ತನ್ನ ಪತಿಯನ್ನು ಕೊಂದು ಕೊಡಗಿನಲ್ಲಿ ಆತನ ಮೃತದೇಹವನ್ನು ಸುಟ್ಟು ಹಾಕಿರುವ ಘಟನೆ ನಡೆದಿದೆ. ಈ ಪ್ರಕರಣದ ತನಿಖಯಲ್ಲಿದ್ದ ಪೊಲೀಸರಿಗೆ ಅಚ್ಚರಿಯ ಸಂಗತಿಯೊಂದು ತಿಳಿದಿದೆ. ಕೊಲೆ ಮಾಡಿರುವ ಮಹಿಳೆ ಮೂರು ಬಾರಿ ಮದುವೆಯಾಗಿದ್ದಳು. ಹಣದ ದುರಾಸೆಯಿಂದ ಆಸ್ತಿಗಾಗಿ ತನ್ನ ಪ್ರಿಯಕರನ ಜೊತೆ ಸೇರಿ ಮೂರನೇ ಪತಿಯನ್ನು ಕೊಂದಿದ್ದಾಳೆ. ಹೈದರಾಬಾದಿನಲ್ಲಿ ಆತನನ್ನು ಕೊಂದು ಶವವನ್ನು ಕಾರಿನಲ್ಲಿ ಕರ್ನಾಟಕಕ್ಕೆ ಕೊಂಡೊಯ್ದು ಅಲ್ಲಿ ಸುಟ್ಟು ಹಾಕಿದ್ದಳು. ಕರ್ನಾಟಕ ಪೊಲೀಸರ ತನಿಖೆಯಿಂದ ವಿಷಯ ಬಹಿರಂಗಗೊಂಡ ನಂತರ ಆಕೆಯನ್ನು ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ.
ತೆಲಂಗಾಣದ ಭುವನಗಿರಿ ಜಿಲ್ಲಾ ಕೇಂದ್ರದಲ್ಲಿ ವಾಸಿಸುತ್ತಿದ್ದ ನಿಹಾರಿಕಾ ಎರಡು ಮದುವೆಯಾಗಿ ವಿಚ್ಛೇದನ ಪಡೆದಿದ್ದಾಳೆ. ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರ್ ನನ್ನು ಮೊದಲು ಮದುವೆಯಾಗಿದ್ದು ಹಾಗೂ ಹರಿಯಾಣದ ವ್ಯಕ್ತಿಯೊಂದಿಗೆ ಎರಡನೇ ಮದುವೆಯಾಗಿದ್ದಾಳೆ. ಹರಿಯಾಣದ ಎರಡನೇ ಪತಿ ದಾಖಲಿಸಿದ್ದ ಪ್ರಕರಣದಲ್ಲಿ ಆಕೆ ಜೈಲಿಗೆ ಹೋದಾಗ ಅಲ್ಲಿನ ಮತ್ತೊಬ್ಬ ಮಹಿಳಾ ಕೈದಿಯ ಸಂಪರ್ಕಕ್ಕೆ ಬಂದಿದ್ದಳು. ಈ ಪ್ರಕ್ರಿಯೆಯಲ್ಲಿ ಆಕೆಯ ಮಗ ರಾಣಾನ ಪ್ರೀತಿಯಲ್ಲಿ ಬಿದ್ದಿದ್ದಳು. ಇನ್ನು ಆರೋಪಿ ನಿಹಾರಿಕಾ ಹೈದರಾಬಾದ್‍ನ ತುಕಾರಾಂಗೇಟ್‍ನ ರಿಯಲ್ ಎಸ್ಟೇಟ್ ವ್ಯಾಪಾರಿ ರಮೇಶ್ ಕುಮಾರ್ ಜೊತೆ ಮ್ಯಾಟ್ರಿಮೋನಿ ಪ್ಲಾಟ್‍ಫಾರ್ಮ್ ಮೂಲಕ ಸಂಪರ್ಕ ಹೊಂದಿದ್ದಳು.
ರಿಯಲ್ ಎಸ್ಟೇಟ್ ವ್ಯಾಪಾರಿ ರಮೇಶನಿಗೆ ಈಗಾಗಲೇ ಪತ್ನಿ ಹಾಗೂ ಮಗಳಿದ್ದಾರೆ. ಆದರೂ ಇಬ್ಬರೂ 2018 ರಲ್ಲಿ ತಮ್ಮ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದರು. ಪೋಚಾರಂ ಸಂಕ್ಷತ್ರಿ ಟೌನ್‍ಶಿಪ್‍ನಲ್ಲಿ ಇಬ್ಬರು ಒಟ್ಟಿಗೆ ಜೀವನ ನಡೆಸುತ್ತಿದ್ದರು. ನಿಹಾರಿಕಾ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದಳು, ಆದರೆ ಇತ್ತಿಚಿನ ನಿಹಾರಿಕಾ ವರ್ತನೆಯಿಂದ ಮೊದಲೇ ಅನುಮಾನಗೊಂಡ ರಮೇಶ್ ಕುಮಾರ್ ಆಕೆಯನ್ನು ತಡೆದಿದ್ದು ವಿವಾದಕ್ಕೆ ಕಾರಣವಾಗಿದೆ.
ನಿಹಾರಿಕಾ ಮತ್ತು ರಾಣಾ ಕೊಲೆ ಮಾಡುವ ಮುನ್ನ ಪ್ಲಾನ್ ಹಾಕಿಕೊಂಡಿದ್ದರು. ಮೇಡಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಪೀರ್ಜಾಡಿಗುಡ ಕಮಾನ್ ಎಂಬಲ್ಲಿ ಕಾರಿನಲ್ಲಿ ಬಂದ ಆರೋಪಿಗಳು ರಮೇಶ್ ಅವರನ್ನು ಹೊಡೆದು ಕೊಂದಿದ್ದಾರೆ. ಬೆಂಗಳೂರಿನಲ್ಲಿರುವ ಮತ್ತೊಬ್ಬ ಗೆಳೆಯ ನಿಖಿಲ್ ರೆಡ್ಡಿಗೆ ನಿಹಾರಿಕಾ ಈ ವಿಷಯ ತಿಳಿಸಿದ್ದಾಳೆ ಅವನ ಸಲಹೆ ಮೇರೆಗೆ ಮೃತ ದೇಹವನ್ನು ಕರ್ನಾಟಕದ ಕೊಡುಗು ಜಿಲ್ಲೆಯ ಸುಂಟಿಕುಪ್ಪಾ ಪ್ರದೇಶಕ್ಕೆ ಕೊಂಡೋಯ್ದು ಅಲ್ಲಿ ಕಾಫಿ ತೋಟದಲ್ಲಿ ಮೃತದೇಹವನ್ನು ಕತ್ತರಿಸಿ ಸುಟ್ಟು ಹಾಕಿದ್ದಾರೆ. ರಮೇಶ್ ಕುಮಾರ್ ಹೆಸರಿನಲ್ಲಿದ್ದ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಕಳಬಳಿಸುವುದಕ್ಕೆ ಕೊಲೆ ಮಾಡಿರುವುದಾಗಿ ಆರೋಪಿಗಳು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.










