ಚನ್ನಪಟ್ಟಣ ಸೇರಿ ಮೂರು ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ: ಸಚಿವ ಚಲುವರಾಯಸ್ವಾಮಿ.

26

ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಿರುಸಿನ ಚಕಮಕಿ ನಡೆಯುತ್ತಿದೆ. ಒಂದೆಡೆ ಎನ್‍ಡಿಎ ನಾಯಕರು ಇನ್ನೊಂದೆಡೆ ಕಾಂಗ್ರೆಸ್ ನಾಯಕರು ಈ ಕ್ಷೇತ್ರವನ್ನು ಗೆಲ್ಲಲು ಷಡ್ಯಂತ್ರ ರೂಪಿಸುತ್ತಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಪ್ರತಿಷ್ಠೆಯ ಕಣವಾಗಿರುವ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ್ರು ಒಂದು ವಾರವೇ ಪ್ರಚಾರ ಮಾಡಲಿ. ಸರ್ವೋಚ್ಚ ನಾಯಕರಾಗಿದ್ರು ಅವರೇ ಸೋತಿಲ್ವ ಎಂದು ಸಚಿವ ಚಲುವರಾಯಸ್ವಾಮಿ ಪ್ರಶ್ನಿಸಿದರು. ಚನ್ನಪಟ್ಟಣ ಕ್ಷೇತ್ರದಲ್ಲಿ ದೇವೇಗೌಡರು ಒಂದು ವಾರ ವಾಸ್ತವ್ಯ ಹೂಡುತ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ನಾವು ಪ್ರಚಾರ ಮಾಡಬೇಡಿ ಅನ್ನೋಕಾಗುತ್ತಾ?. ಸೋಲು ಗೆಲುವನ್ನ ಜನತೆ ಆ ಕ್ಷಣ ತೀರ್ಮಾನ ಮಾಡ್ತಾರೆ ಎಂದು ಹೇಳಿದರು.
ಚನ್ನಪಟ್ಟಣ ವಿಧಾನಸಭೆ ಚುನಾವಣೆಗೂ ಸಿಎಂ ಬದಲಾವಣೆಗೂ ಯಾವುದೇ ಸಂಬಂಧವಿಲ್ಲ. ಸಿಎಂ ಬದಲಾವಣೆ ವಿಚಾರ ಇದೀಗ ಅಪ್ರಸ್ತುತ. ಅದನ್ನು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಚನ್ನಪಟ್ಟಣ ಸೇರಿದಂತೆ ನಾವು ಮೂರು ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಸಚಿವ ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಸರ್ಕಾರದ ಗ್ಯಾರಂಟಿ ಯೋಜನೆ, ಸರ್ಕಾರದ ಸಾಧನೆಗಳ ಮೇಲೆ ನಾವು ಮತ ಕೇಳ್ತೀವಿ. ಗ್ಯಾರಂಟಿಗಳು ಒಕ್ಕಲಿಗ ಸಮುದಾಯಕ್ಕೂ ತಲುಪುತ್ತಿವೆ. ಹಳೇ ಮೈಸೂರು ಭಾಗದ ನಾವೆಲ್ಲ ಅಲ್ಲಿರುತ್ತೇವೆ. ಮುಂಬೈ ಕರ್ನಾಟಕದವರು ಶಿಗ್ಗಾಂವಿಯಲ್ಲಿ ಇರುತ್ತಾರೆ. ಹೈದರಾಬಾದ್ ಕರ್ನಾಟಕದವರು ಸಂಡೂರಿನಲ್ಲಿ ಇರುತ್ತಾರೆ. ನಾವು ಗೆದ್ದೇ ಗೆಲ್ತೀವಿ ಎಂದು ಸಚಿವ ಚಲುವರಾಯಸ್ವಾಮಿ ಆತ್ಮವಿಶ್ವಾಸದಿಂದ ಹೇಳಿದರು.