ಗುಜರಾತ್‍ನ ಬುಲೆಟ್ ಟ್ರೈನ್ ನಿರ್ಮಾಣ ಸ್ಥಳದಲ್ಲಿ ಸೇತುವೆ ಕುಸಿದು ಮೂವರ ಸಾವು.

22

ಗುಜರಾತ್: ಗುಜರಾತ್‍ನ ಆನಂದ್ ಜಿಲ್ಲೆಯಲ್ಲಿ ನಿನ್ನೆ ಸಂಜೆ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್‍ನ ನಿರ್ಮಾಣ ಸ್ಥಳದಲ್ಲಿ ತಾತ್ಕಾಲಿಕ ಸೇತುವೆ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಆರಂಭದಲ್ಲಿ ಪೊಲೀಸರು ನಿರ್ಮಾಣ ಹಂತದಲ್ಲಿರುವ ಸೇತುವೆ ಕುಸಿದಿದೆ ಎಂದು ವರದಿ ಮಾಡಿದ್ದರು. ಆದರೆ, ಅನಂತರ ಬುಲೆಟ್ ರೈಲು ಯೋಜನೆಯ ಮೇಲ್ವಿಚಾರಣೆ ನಡೆಸುತ್ತಿರುವ ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೋರೇಶನ್ ಲಿಮಿಟೆಡ್ ವಡೋದರಾದ ಮಾಹಿ ನದಿ ಸಮೀಪ ನಿರ್ಮಿಸಲಾಗಿದ್ದ ತಾತ್ಕಾಲಿಕ ಸ್ಟೀಲ್ ಹಾಗೂ ಕಾಂಕ್ರೀಟ್ ಸೇತುವೆ ಕುಸಿಯಿತು ಎಂದು ಸ್ಪಷ್ಟನೆ ನೀಡಿದ್ದಾರೆ. ಈ ದುರ್ಘಟನೆಯಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿರುವುದನ್ನು ಆನಂದ್ ಜಿಲ್ಲೆಯ ಪೊಲೀಸ್ ಅಧೀಕ್ಷಕ ಗೌರವ್ ಜಸಾನಿ ದೃಢಪಡಿಸಿದ್ದಾರೆ. ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಗಾಯಗೊಂಡ ಇನ್ನೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ನಾಲ್ವರು ಕಾರ್ಮಿಕರು ಕಾಂಕ್ರೀಟ್ ಬ್ಲಾಕ್ ಅಡಿಯಲ್ಲಿ ಸಿಲುಕಿಕೊಂಡರು. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಸಂದರ್ಭ ಸಾವನ್ನಪ್ಪಿದರು’’ ಎಂದು ಆನಂದ್ನ ಅಗ್ನಿಶಾಮಕದ ದಳದ ಅಧಿಕಾರಿ ಧರ್ಮೇಶ್ ಗೋರ್ ತಿಳಿಸಿದ್ದಾರೆ.