ಸೋತು ಮೂಲೆ ಸೇರಲ್ಲ, ಸೋಲಿನಿಂದ ಎದೆಗುಂದಲ್ಲ: ಚನ್ನಪಟ್ಟಣ ಫಲಿತಾಂಶ ಬಳಿಕ ನಿಖಿಲ್ ಪ್ರತಿಕ್ರಿಯೆ.

39

ಚನ್ನಪಟ್ಟಣ: ಭಾರೀ ಕುತೂಹಲ ಕೆರಳಿಸಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆದ್ದು ಬೀಗಿದ್ದಾರೆ. ಎನ್‍ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಸತತ ಮೂರನೇ ಸೋಲು ಕಾಣುವ ಮೂಲಕ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಸೋಲಿನ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್, ಸೋಲಿನಿಂದ ಎದೆಗುಂದುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಬಿಡದಿಯ ತೋಟದ ಮನೆಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಒಂದು ಸಮುದಾಯದ ಮತಗಳು ಕಾಂಗ್ರೆಸ್ ಪರವಾಗಿ ಕ್ರೋಢೀಕರಣ ಆದವು. ಆ ಸಮುದಾಯದ ಪರವಾಗಿ ಹಲವು ಸಂದರ್ಭದಲ್ಲಿ ಗಟ್ಟಿಯಾಗಿ ನಿಂತಿದ್ದೆವು. ಮೀಸಲಾತಿ ಕೊಟ್ಟಿದ್ದೆವು. ಆದರೆ, ಅದೆಲ್ಲವನ್ನೂ ಏಕಾಏಕಿ ತೆಗೆದು ಹಾಕಿ ನಮಗೆ ಸ್ಪಂದನೆ ನೀಡಿಲ್ಲ. ಎಂದು ಬೇಸರ ವ್ಯಕ್ತಪಡಿಸಿದರು. ಚನ್ನಪಟ್ಟಣದಲ್ಲಿ ನಮ್ಮದೇ ಆದ ಸ್ಥಿರವಾದ ಮತದಾರರಿದ್ದಾರೆ, ಅವರು ನಮ್ಮ ಕೈಬಿಟ್ಟಿಲ್ಲ. ಕಾರ್ಯಕರ್ತರು, ಮತದಾರರು, ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ತಿಳಿಸಿದರು. ಈ ಸೋಲಿನಿಂದ ನಾನು ಎದೆಗುಂದುವ ಪ್ರಶ್ನೆಯೇ ಇಲ್ಲ. ನನ್ನ ಭಾವನೆಗಳನ್ನು ಈ ಸಂದರ್ಭದಲ್ಲಿ ಹೊರಗೆ ಹಾಕಲು ಹೋಗುವುದಿಲ್ಲ. ಕಾರ್ಯಕರ್ತರು ನಮ್ಮ ಬೆನ್ನೆಲುಬು. ಅವರಿಗೆ ನಾನು ಬೇಸರ ಮಾಡುವುದಿಲ್ಲ ಎಂದರು. ದೇವೇಗೌಡರು ಫಿನಿಕ್ಸ್ ನಂತೆ ಜೆಡಿಎಸ್ ಪಕ್ಷವನ್ನು ಕಟ್ಟಿದ್ದಾರೆ. ಎಲ್ಲಾ ಏಳುಬೀಳುಗಳನ್ನು ನೋಡಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಯಾಣಿಕ ಪ್ರಯತ್ನ ಮಾಡುತ್ತೇನೆ. ಇನ್ನೂ ವಯಸ್ಸಿದೆ, ಪಕ್ಷವನ್ನು ಕಟ್ಟಿ ಬೆಳೆಸುತ್ತೇನೆ,” ಎಂದು ನಿಖಿಲ್ ಕುಮಾರಸ್ವಾಮಿ ಭರವಸೆ ನೀಡಿದರು. ಈ ಚುನಾವಣೆಯಲ್ಲಿ ಎಡವಿದ್ದೆಲ್ಲಿ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ, ಈಗಷ್ಟೇ ಫಲಿತಾಂಶ ಬಂದಿದೆ. ಯಾರೊಬ್ಬರು ತೆಗೆದುಕೊಂಡ ನಿರ್ಣಯಗಳು, ಯಾಕೆ ಸೋಲಾಗಿದೆ ಎನ್ನುವ ಪೋಸ್ಟ್ಮಾರ್ಟಂ ಮಾಡಬೇಕಾಗಿಲ್ಲ. ಜನಸಾಮಾನ್ಯರ ತೀರ್ಪೇ ಅಂತಿಮ. ಎಲ್ಲಿ ಎಡವಿದ್ದೇವೆ. ಎಲ್ಲಿ ತಪ್ಪಾಗಿದೆ ಎಂದು ಮುಖಂಡರ ಜೊತೆ ಮುಂದೆ ಚರ್ಚೆ ಮಾಡುತ್ತೇವೆ, ಎಂದು ತಿಳಿಸಿದರು.