ದೆಹಲಿ ಚಲೋ ಪ್ರತಿಭಟನೆ ರಾಜಧಾನಿಗೆ ರೈತರ ಪಾದಯಾತ್ರೆ, ಗಡಿಯಲ್ಲಿ ಪೊಲೀಸರ ಬಿಗಿ ಭದ್ರತೆ.

35

ನವದೆಹಲಿ: ರಾಷ್ಟ್ರ ರಾಜಧಾನಿಗೆ ಪಂಜಾಬ್ ರೈತರ ಮೆರವಣಿಗೆಗೆ ಮುನ್ನ ದೆಹಲಿ ಪೊಲೀಸರ ಇಂದು ಶುಕ್ರವಾರ ಗಡಿಭಾಗದಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ರೈತರು ಇಂದು ಮಧ್ಯಾಹ್ನ 1 ಗಂಟೆಗೆ ಶಂಭು ಬಾರ್ಡರ್‌ನಿಂದ ದೆಹಲಿಗೆ ತೆರಳಲು ಸಜ್ಜಾಗುತ್ತಿದ್ದಂತೆ ಪೊಲೀಸರು ಅಂಬಾಲಾ-ದೆಹಲಿ ಗಡಿಯಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ. ಕಳೆದ ಫೆಬ್ರವರಿಯಲ್ಲಿ ದೆಹಲಿ ತಲುಪಲು ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಬ್ಯಾನರ್ ಅಡಿಯಲ್ಲಿ ರೈತ ಗುಂಪುಗಳು ಮುತ್ತಿಗೆ ಹಾಕಲು ನಡೆಸಿದ ಎರಡು ಪ್ರಯತ್ನಗಳನ್ನು ಭದ್ರತಾ ಪಡೆಗಳು ತಡೆದ ನಂತರ ಇದು ಮೂರನೇ ಪ್ರಯತ್ನವಾಗಿದೆ. ಅಂಬಾಲಾ ಆಡಳಿತವು ಬಿಎನ್‍ಎಸ್‍ಎಸ್‍ನ ಸೆಕ್ಷನ್ 163 ನ್ನು ವಿಧಿಸಿ ಐದಕ್ಕಿಂತ ಹೆಚ್ಚು ಜನರು ಒಂದು ಕಡೆ ಸೇರುವುದು, ಸಭೆ ನಡೆಸುವುದನ್ನು ನಿರ್ಬಂಧಿಸಲಾಗಿದೆ. ಶಂಭು ಗಡಿಯ ಸಮೀಪವಿರುವ ಪ್ರತಿಭಟನಾ ಸ್ಥಳದಲ್ಲಿ ನೊಟೀಸ್ ನೀಡಿದೆ. ಅಂಬಾಲಾ ಅಧಿಕಾರಿಗಳು ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚಲು ಆದೇಶಿಸಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಶುಕ್ರವಾರ ರಜೆ ಇರಲಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಅಂಬಲ ಸುರೇಶ್ ಕುಮಾರ್ ತಿಳಿಸಿದ್ದಾರೆ. ಮೆರವಣಿಗೆಯನ್ನು ಶಾಂತಿಯುತ ರೀತಿಯಲ್ಲಿ ನಡೆಸಲಾಗುವುದು ಎಂದು ಹೇಳಿದ ಪಂಧೇರ್, ಹರ್ಯಾಣ ಆಡಳಿತವು ಪಾದಯಾತ್ರೆಯನ್ನು ನಿಷೇಧಿಸಿರುವುದನ್ನು ಟೀಕಿಸಿದರು. ರೈತರ ಮೆರವಣಿಗೆ 297ನೇ ದಿನಕ್ಕೆ ಕಾಲಿಟ್ಟಿದ್ದು, ಖಾನೌರಿ ಗಡಿಯಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವದಿ ಉಪವಾಸ ಸತ್ಯಾಗ್ರಹ 11ನೇ ದಿನಕ್ಕೆ ಕಾಲಿಟ್ಟಿದೆ. ಮಧ್ಯಾಹ್ನ 1 ಗಂಟೆಗೆ 101 ರೈತರ ಜಾಥಾ ಶಂಭು ಗಡಿಯಿಂದ ದೆಹಲಿಯತ್ತ ಸಾಗಲಿದೆ ಎಂದು ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.