ಕೃಷ್ಣಾ ಮೇಲ್ದಂಡೆ ಯೋಜನೆ ವಿಳಂಬ: ಕಾರಜೋಳ ಭಾಷಣದ ವೇಳೆ ಗಲಾಟೆ, ರೈತರ ಆಕ್ರೋಶ.

24

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ನಡೆದಿರುವ ಹೋರಾಟ ವೇದಿಕೆಗೆ ಆಗಮಿಸಿದ್ದ ಬಿಜೆಪಿ ಸಂಸದ ಗೋವಿಂದ ಕಾರಜೋಳ ಅವರಿಗೆ ಮುಜುಗರ ಎದುರಾಗಿದ್ದು, ಕಾರಜೋಳ ಭಾಷಣದ ವೇಳೆ ರೈತರು ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) 3ನೇ ಹಂತವನ್ನು ಪೂರ್ಣಗೊಳಿಸಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತ ಜನಾಂದೋಲನ ಸಮಿತಿಯು ಬಾಗಲಕೋಟೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಅನಿರ್ದಿಷ್ಟಾವದಿ ಪ್ರತಿಭಟನೆ ಆರಂಭಿಸಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿನ ವಿಳಂಬದ ವಿಚಾರವಾಗಿ ನಡೆದಿರುವ ಹೋರಾಟ ಬೆಂಬಲಿಸಲು ಬಂದಿದ್ದ ಮಾಜಿ ಡಿಸಿಎಂ ಹಾಗೂ ಚಿತ್ರದುರ್ಗ ಬಿಜೆಪಿ ಸಂಸದ ಗೋವಿಂದ ಕಾರಜೋಳ ಭಾಷಣದ ವೇಳೆ ಗಲಾಟೆ ನಡೆಯಿತು. ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಬಿಜೆಪಿ ಸಂಸದ ಗೋವಿಂದ ಕಾರಜೋಳ ಅವರು ಧರಣಿ ನಿರತ ರೈತರನ್ನು ಉದ್ದೇಶಿಸಿ ಮಾತನಾಡುವಾಗ, ಸಭೆಯಲ್ಲಿದ್ದ ಕೆಲವರು ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿಯ ಅಧಿಕಾರಾವಧಿಯಲ್ಲಿ ಬೃಹತ್ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ದೀರ್ಘಾವಧಿಯ ವಿಳಂಬವಾಗಿತ್ತು ಎಂದು ಟೀಕಿಸಿದರು. ಅಂತೆಯೇ ಎರಡು ಹಂತಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸುವ ಪ್ರಸ್ತಾಪದ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿದರು. ಮೊದಲ ಹಂತದಲ್ಲಿ ಜಲಾಶಯದ ಎತ್ತರವನ್ನು 519.6 ಮೀ ನಿಂದ 522 ಮೀ ಗೆ ಮತ್ತು ಎರಡನೇ ಹಂತದಲ್ಲಿ 522 ಮೀ ನಿಂದ 524.256 ಮೀ ಗೆ ಹೆಚ್ಚಿಸುವತ್ತ ಗಮನ ಹರಿಸಲಾಗಿದೆ. ಯೋಜನೆ ವಿಳಂಬಕ್ಕೆ ಬಿಜೆಪಿ ಸರ್ಕಾರವೇ ಕಾರಣ ಎಂದು ದೂರಿದರು.