ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಯುವಕರು ಬಚಾವ್.

26

ಮೈಸೂರು: ಬೈಕ್ ಸವಾರನೋರ್ವ ಕಾಡಾನೆ ದಾಳಿಯಿಂದ ಕೊಂಚದರಲ್ಲೇ ಪಾರಾದ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಮೈಸೂರು ಮಾನಂದವಾಡಿ ರಸ್ತೆಯಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ನಡೆದ ಭಯಾನಕ ಘಟನೆಯ ವಿಡಿಯೋ ವೈರಲ್ ಆಗಿದೆ. ಇಬ್ಬರು ಬೈಕ್‍ನಲ್ಲಿ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಯ ಮಾನಂದವಾಡಿಯಿಂದ ಮೈಸೂರು ಕಡೆ ಬರುತ್ತಿದ್ದರು. ಈ ವೇಳೆ, ಕಾಡಿನಿಂದ ಏಕಾಏಕಿ ಅಟ್ಟಾಡಿಸಿಕೊಂಡು ಬಂದ ಒಂಟಿ ಸಲಗ, ಯುವಕರ ಮೇಲೆ ದಾಳಿಗೆ ಮುಂದಾಗಿದೆ. ಆಗ ಚಾಲಕ ತಕ್ಷಣ ಬೈಕ್ ನಿಲ್ಲಿಸಿದ್ದಾನೆ. ಹಿಂಬದಿ ಸವಾರ ಬೈಕ್‍ನಿಂದ ಇಳಿದು ಹಿಂದಕ್ಕೆ ಓಡಿ ಬಂದಿದ್ದು, ಚಾಲಕ ಬೈಕ್‍ನ್ನು ಹಿಂತೆಗೆದುಕೊಂಡು ಬರುವ ಯತ್ನದಲ್ಲಿ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಈ ವೇಳೆ ಸಮೀಪವೇ ಬಂದ ಕಾಡಾನೆ, ಅದೇ ರಸ್ತೆಯಲ್ಲಿ ಬಂದ ಲಾರಿ ಹಾರ್ನ್ ಶಬ್ದ ಹಾಗೂ ಚೀರಾಟ ಕಂಡು ಘೀಳಿಡುತ್ತಾ ರಸ್ತೆ ಪಕ್ಕಕ್ಕೆ ತೆರಳಿದೆ. ಲಾರಿ ಚಾಲಕನ ಸಮಯ ಪ್ರಜ್ಞೆ, ಬದುಕಿದವು ಜೀವಗಳು: ತಕ್ಷಣ ಸವಾರನೂ ಬೈಕ್ ಬಿಟ್ಟು ಓಡಿ ಬಂದಿದ್ದಾರೆ. ಸಮಯಪ್ರಜ್ಞೆ ಮೆರೆದ ಲಾರಿ ಚಾಲಕ ಅವರನ್ನು ತರಾತುರಿಯಲ್ಲಿ ಹತ್ತಿಸಿಕೊಂಡಿದ್ದಾನೆ. ಹೀಗಾಗಿ, ಯುವಕರು ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಅದನ್ನು ಕಂಡ ಕಾಡಾನೆ ಏನೂ ಮಾಡಲಾಗದೇ ರಸ್ತೆ ಪಕ್ಕದಲ್ಲೇ ನಿಂತಿದೆ. ಘಟನೆ ದೃಶ್ಯವು ಬೈಕ್ ಹಿಂಬದಿ ಸವಾರದ ಹೆಲ್ಮೆಟ್ ಕ್ಯಾಮರಾದಲ್ಲಿ ಸೆರೆಯಾಗಿದೆ.