ರಷ್ಯಾ ಮೇಲೆ ಉಕ್ರೇನ್ ಸ್ಫೋಟಕ ಡ್ರೋನ್ ದಾಳಿ.

25

ಕೀವ್: ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದ ರಷ್ಯಾಗೆ ಡ್ರೋನ್ ದಾಳಿ ಮೂಲಕ ಉಕ್ರೇನ್ ತಿರುಗೇಟು ನೀಡಿದ್ದು, ಉಕ್ರೇನ್ ದಿಢೀರ್ ಕ್ರಮಕ್ಕೆ ರಷ್ಯಾದ ಕಜಾನ್ ಜನತೆಗೆ ಬೆಚ್ಚಿಬೀಳಿಸಿದೆ. ಉಕ್ರೇನ್‍ನ 8 ಸ್ಫೋಟಕ ಡ್ರೋನ್ ವಿಮಾನಗಳು ರಷ್ಯಾದ ಕಜಾನ್ ನಗರದ ಮೇಲೆ ದಾಳಿ ನಡೆಸಿವೆ ಎಂಬ ಮಾಹಿತಿ ತಿಳಿದಿದೆ. ಇದೇ ನಗರದಲ್ಲಿ ಇತ್ತೀಚೆಗೆ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆ ನಡೆದಿದ್ದು, ಭಾರತದ ಪ್ರಧಾನಿ ಮೋದಿ ಸೇರಿದಂತೆ ಹಲವು ವಿಶ್ವ ನಾಯಕರು ಆಗಮಿಸಿದ್ದರು. ಘಟನೆಯಲ್ಲಿ ಇಲ್ಲಿಯವರೆಗೆ ಯಾವುದೇ ಸಾವು ನೋವು ಸಂಭವಿಸಿದ ಮಾಹಿತಿ ಲಭ್ಯವಾಗಿಲ್ಲ. ಆದರೆ ಕಟ್ಟಡಗಳು ವ್ಯಾಪಕವಾಗಿ ಹಾನಿಗೊಳಗಾಗಿರುವುದಾಗಿ ವರದಿಗಳು ತಿಳಿಸಿವೆ. ದಾಳಿಯಲ್ಲಿ 3 ಕಟ್ಟಡಗಳು ಹಾನಿಗೊಳಗಾಗಿದ್ದು, ಜನರನ್ನು ಅಲ್ಲಿಂದ ಸ್ಥಳಾಂತರಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಸ್ಥಳೀಯ ಆಡಳಿತವು ಜನರಿಗೆ ಊಟ, ಬಟ್ಟೆಗಳನ್ನು ಒದಗಿಸಲಾಗಿದೆ ಎಂದು ತಿಳಿದುಬಂದಿದೆ. ದಾಳಿಯ ನಂತರ ಕಜನ್ ವಿಮಾನ ನಿಲ್ದಾಣವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಮತ್ತು ಇಝೆವ್ಸ್ಕ್ ವಿಮಾನ ನಿಲ್ದಾಣದಲ್ಲಿ ನಿಬರ್ಂಧಗಳನ್ನು ಜಾರಿಗೊಳಿಸಲಾಗಿದೆ ಎಂದು ರಷ್ಯಾದ ವಾಯುಯಾನ ವಾಚ್‍ಡಾಗ್ ರೊಸಾವಿಯಾಟ್ಸಿಯಾ ಹೇಳಿದ್ದಾರೆ. ಕಜನ್ ಮಾಸ್ಕೋದಿಂದ ಪೂರ್ವಕ್ಕೆ ಸುಮಾರು 800 ಕಿಲೋಮೀಟರ್ ದೂರದಲ್ಲಿದೆ. ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ಪ್ರಕಾರ, ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಯು ಕಜಾನ್ ನಗರದಲ್ಲಿ ಡ್ರೋನ್ ಅನ್ನು ಉರುಳಿಸಿದ್ದು, ಕೆಲವು ಡ್ರೋನ್‍ಗಳು ಅದನ್ನು ಭೇದಿಸಿ ದಾಳಿ ನಡೆಸಿವೆ ಎಂದು ಹೇಳಲಾಗುತಿದೆ.