ಹೊಂಡಕ್ಕೆ ಉರುಳಿಬಿದ್ದ ಸೇನಾ ವಾಹನ, ಕರ್ನಾಟಕದ ಮೂವರು ಯೋಧರು ಹುತಾತ್ಮ.

27

ಬೆಳಗಾವಿ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಪೊಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಮಂಗಳವಾರ ಸಂಜೆ ಸೇನಾ ವಾಹನ 150 ಅಡಿ ಹೊಂಡಕ್ಕೆ ಉರುಳಿಬಿದ್ದು ಸಂಭವಿಸಿದ ಅಪಘಾತದಲ್ಲಿ ಕರ್ನಾಟಕದ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಒಟ್ಟು ಐವರು ಹುತಾತ್ಮರಾಗಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಹುತಾತ್ಮ ಯೋಧರನ್ನು ಬೆಳಗಾವಿ ಬಳಿಯ ಸಾಂಬ್ರಾ ಗ್ರಾಮದ ಯೋಧ ಸುಬೇದಾರ್ ದಯಾನಂದ ತಿರಕಣ್ಣವರ, ಕುಂದಾಪುರ ಬಳಿಯ ಕೋಟೇಶ್ವರ ಬಿಜಾಡಿಯ ಅನೂಪ್, ಮಹಾಲಿಂಗಪುರದ ಮಹೇಶ್ ಮರಿಗೊಂಡ ಎಂದು ಗುರುತಿಸಲಾಗಿದೆ. ಮಾಹಿತಿ ತಿಳಿದು ಹುತಾತ್ಮ ಯೋಧರ ಸಂಬಂಧಿಕರು ಹಾಗೂ ಸ್ನೇಹಿತರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಸುಬೇದಾರ್ ದಯಾನಂದ ಅವರು ಕೆಲವು ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇಂದು ಮಧ್ಯಾಹ್ನದ ವೇಳೆಗೆ ಪಾರ್ಥಿವ ಶರೀರ ಗ್ರಾಮಕ್ಕೆ ತರುವ ನಿರೀಕ್ಷೆಯಿದೆ ಎಂದು ಮಾಹಿತಿ ತಿಳಿಸಲಾಗಿದೆ. ದೇಶ ಸೇವೆಗಾಗಿ ಹುತಾತ್ಮರಾದ ಯೋಧರ ತ್ಯಾಗ, ಬಲಿದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸ್ಮರಿಸಿದ್ದಾರೆ