ಮೈಸೂರು: ಇನ್ಶೂರೆನ್ಸ್ ಹಣದ ಆಸೆಗಾಗಿ ತಂದೆಯನ್ನೇ ಹತ್ಯೆ ಮಾಡಿದ ಮಗನೊಬ್ಬ ನಂತರ ಅಪಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಕಥೆ ಕಟ್ಟಲು ಪ್ರಯತ್ನಿಸಿದ ಪ್ರಕರಣ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದ್ದು, ಕೊಲೆ ಮಾಡಿದ ಮಗನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ. ಪಿರಿಯಾಪಟ್ಟಣದ ಕೊಪ್ಪ ಗ್ರಾಮದ ಗೆರೋಸಿ ಕಾಲೋನಿಯ ಪಾಂಡು ಎಂಬುವವನೇ ತನ್ನ ತಂದೆ ಅಣ್ಣಪ್ಪ ಅವರನ್ನು ಹತ್ಯೆ ಮಾಡಿರುವ ಆರೋಪಿಯಾಗಿದ್ದಾನೆ. ಪಿರಿಯಾಪಟ್ಟಣದ ಬೈಲುಕುಪ್ಪೆ ಬಳಿ ಬುಧವಾರ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಅಣ್ಣಪ್ಪನ ಹೆಸರಲ್ಲಿ ವಿಮೆ ಮಾಡಿಸಿದ ಮಗ ಪಾಂಡು, ಆ ಹಣದ ಆಸೆಗೆ ಈ ಕೃತ್ಯ ಮಾಡಿದ್ದಾನೆ. ನಿಮಗೆ ಟಿಬೇಟಿಯನ್ ಮೊದಲನೇ ಕ್ಯಾಂಪಿನಲ್ಲಿ ಕೆಲಸ ಇದೆ, ನೀವು ಹೋಗಿ ಎಂದು ತಂದೆಗೆ ಹೇಳಿರುವ ಮಗ, ನಂತರ ಹಿಂದೆಯಿಂದ ಫಾಲೋ ಮಾಡಿಕೊಂಡು ಬಂದವನೇ ಅವರ ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ಅಣ್ಣಪ್ಪ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂತರ ಮಗ ತನ್ನ ತಂದೆಯ ಶವವನ್ನು ಬಿ.ಎಂ. ರಸ್ತೆಯ ಮಂಚ ದೇವನಹಳ್ಳಿ ಸಮೀಪ ಬಿಸಾಡಿ ಹೋಗಿದ್ದಾನೆ. ಸ್ವಲ್ಪ ಸಮಯದ ನಂತರ ಪೊಲೀಸ್ ಠಾಣೆಗೆ ಬಂದು ತನ್ನ ತಂದೆಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಕಥೆ ಹೇಳಿ ದೂರು ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪಾಂಡು ನೀಡಿದ ದೂರಿನ ಹಿನ್ನೆಲೆಯಲ್ಲಿ ಸಬ್ ಇನ್ಸ್ಪೆಕ್ಟರ್ ಅಜಯ್ ಕುಮಾರ್ ಮತ್ತು ತಂಡ ಅನುಮಾನದ ಮೇಲೆ ತನಿಖೆಯನ್ನು ನಡೆಸಿದ್ದಾರೆ. ಆಗ ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ತನ್ನ ತಂದೆ ಹೆಸರಿನಲ್ಲಿ ಇನ್ಶೂರೆನ್ಸ್ ಇದೆ. ಅವರು ಅಪಘಾತದಲ್ಲಿ ಮೃತಪಟ್ಟರೆ ಎರಡು ಪಟ್ಟು ಹಣ ಸಿಗುವ ಆಸೆಯಲ್ಲಿ ಈ ಕೃತ್ಯ ಎಸಗಿದ್ದೇನೆ ಎಂದು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ವರದಿ ತಿಳಿಸಿದ್ದಾರೆ.










