ಬೆಂಗಳೂರು: ಬೀದರ್‍ನ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣವನ್ನು ಬಿವೈ ವಿಜಯೇಂದ್ರ ಸರ್ಕಾರಿ ಯೋಜಿತ ಆತ್ಮಹತ್ಯೆ ಎಂದು ಹೇಳಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಬೀದರ್‍ನ ಗುತ್ತಿಗೆದಾರ ಸಚಿನ್ ಮಾನಪ್ಪ ಪಾಂಚಾಳ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ. ಸರಣಿ ಆತ್ಮಹತ್ಯೆ ಪ್ರಕರಣಗಳನ್ನು ರಾಜ್ಯ ಹಿಂದೆಂದೂ ನೋಡಿರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಸಹೋದರಿಯರು ದೂರು ಕೊಡಲು ಹೋದಾಗ 12 ಗಂಟೆಗಳ ಕಾಲ ಪೊಲೀಸರು ಏನೂ ತಲೆಕೆಡಿಸಿಕೊಂಡಿಲ್ಲ, ಹೆಣ್ಣುಮಕ್ಕಳಿಗೆ ಹೀಯಾಳಿಸಿ ಅಪಮಾನ ಮಾಡಿ ಪೊಲೀಸರು ನಿಂದಿಸಿರುವುದು ಅಪರಾಧ ಎಂದು ತಿಳಿಸಿದರು. ಕಲಬುರಗಿ ಜಿಲ್ಲೆಯ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ, ಕಲಬುರಗಿ ಜಿಲ್ಲೆ ಯಾರ ಕಪಿಮುಷ್ಠಿಯಲ್ಲಿದೆ ಎಂದು ಬಸ್ ನಿಲ್ದಾಣದಲ್ಲಿ ನಿಂತು ಕೇಳಿದರೂ ಹೇಳುತ್ತಾರೆ ಎಂದು ಹೇಳಿದರು. ಕಾಂಗ್ರೆಸ್‍ನವರು ಬೆಳಗಿನ ಜಾವ 2-3 ಗಂಟೆಗೆ ಸಚಿನ್ ಕುಟುಂಬದವರನ್ನು ಭೇಟಿ ಮಾಡುತ್ತಾರೆ, ಕಾಂಗ್ರೆಸ್‍ನವರು ಹಾಗಲು ಕಾರ್ಯಾಚರಣೆ ಮಾಡುವುದಿಲ್ಲ. ಕುಟುಂಬಕ್ಕೆ ಸಮಾಧಾನ ಮಾಡಿ ಆಗದಿದ್ದರೆ ಬೆದರಿಕೆ ಹಾಕುತ್ತಾರೆ, ಇಡಿ ಕಲಬುರಗಿ ಜಿಲ್ಲೆಯ ಪೊಲೀಸ್ ಖರ್ಗೆ ಕುಟುಂಬದ ಹಿಡಿತದಲ್ಲಿದೆ ಎಂದರು. ಸಿಎಂ ತಕ್ಷಣವೇ ಪ್ರಿಯಾಂಕ್ ಖರ್ಗೆಯಿಂದ ರಾಜೀನಾಮೆ ಪಡೆಯಬೇಕು, ಸಚಿನ್ ಕುಟುಂಬಕ್ಕೆ ಸರ್ಕಾರ ಭದ್ರತೆಯನ್ನು ನೀಡಬೇಕು, ಹಾಗೂ ಅವರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಬೇಕು ಮತ್ತು ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಒತ್ತಾಯಿಸಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.










