ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ಖಂಡಿಸಿ ಶಹಾಪುರ ಬಂದ್.

29

ಯಾದಗಿರಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅಮಿತ್ ಶಾ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು, ಅವರ ರಾಜೀನಾಮೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಮಂಗಳವಾರ ಶಹಾಪುರ ಬಂಗ್‍ಗೆ ಕರೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಸಿಪಿಐಎಂ, ಅಲ್ಪಸಂಖ್ಯಾತ, ದಲಿತ, ವಕೀಲರ ಸಂಘ, ಸಂತ ಸೇವಾಲಾಲ್, ಮಹರ್ಷಿ ವಾಲ್ಮೀಕಿ ಕನ್ನಡಪರ ಸಂಘಟನೆಗಳು ಹಾಗೂ ಅಂಬೇಡ್ಕರ್ ವಿಚಾರವಾದಿಗಳ ಬಳಗದ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಸಾರಿಗೆ ಬಸ್ ಸಂಚಾರ ಸ್ಥಗಿತವಾಗಿದ್ದು, ಅಂಗಡಿ, ಮುಗ್ಗಟ್ಟುಗಳು ಬಂದ್ ಆಗಿದ್ದವು. ಶಾಲಾ, ಕಾಲೇಜುಗಳಿಗೆ ರಜೆಯನ್ನು ಕೊಡಲಾಗಿತ್ತು. ನಗರದ ಕನ್ಯಾಕೋಳೂರು ಅಗಸಿಯಿಂದ ಆರಂಭಗೊಂಡ ಬೃಹತ್ ಪ್ರತಿಭಟನಾ ಮೆರವಣಿಗೆಯು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಣಕು ಶವಯಾತ್ರೆಯೊಂದಿಗೆ ರಾಜ್ಯ ಹೆದ್ದಾರಿ ಮೂಲಕ ತಹಸೀಲ್ದಾರ್ ಕಚೇರಿಯವರೆಗೆ ನಡೆಯಿತು. ಮನುಸ್ಮೃತಿ ಆರಾಧಕರ ವಿರುದ್ಧ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಂಪರೆ ರಕ್ಷಿಸಲು ನಾವು ಹೋರಾಟ ಮಾಡುತ್ತೇವೆ. ಅಮಿತ್ ಶಾ ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಿ, ಅವರನ್ನು ಈ ದೇಶದಿಂದ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದರು.