ಬೆಂಗಳೂರು: ಬೆಳ್ಳಂಬೆಳಗ್ಗೆ ಎರಡು ಅಂತಸ್ತಿನ ಕಟ್ಟಡದಲ್ಲಿ ಸಿಲಿಂಡರ್ ಸ್ಫೋಟವಾದ ದುರಂತ ಘಟನೆ ಆನೇಕಲ್ ತಾಲೂಕಿನ ಕಿತ್ತಗಾನಹಳ್ಳಿಯಲ್ಲಿ ಸಂಭವಿಸಿದೆ. 2 ಮಂದಿ ಯುವಕರು ವಾಸವಿದ್ದ ಮನೆ ಬ್ಲಾಸ್ಟ್ ಆಗಿದೆ. ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಒಬ್ಬನಿಗೆ ಗಾಯ, ಇನ್ನೊಬ್ಬನಿಗೆ ತಲೆ-ಕೈಕಾಲುಗಳಿಗೆ ಪೆಟ್ಟಾಗಿದೆ. ಸ್ಫೋಟಕ್ಕೆ ಕಾರಣ ಏನು ಅನ್ನೋದು ಇನ್ನು ಸ್ಪಷ್ಟವಾಗಿ ತಿಳಿದಿಲ್ಲ. ಕೇರಳ ಮೂಲದ ವಿಷ್ಣು ಜಯರಾಜ್, ಸುನೀಲ್ ಜೋಸೆಫ್ ಎಂಬವರು ಗಾಯಗೊಂಡಿದ್ದು, ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟದ ತೀವ್ರತೆಗೆ ಮನೆ ಗೋಡೆಗಳು, ಬಾಗಿಲು, ಕಿಟಕಿ ಛಿದ್ರವಾಗಿ ಹೋಗಿದೆ. ಅಕ್ಕಪಕ್ಕದ ನಾಲ್ಕೈದು ಮನೆಗಳು ಹಾಗೂ ಕೆಲವು ವಾಹನಗಳು ಕೂಡ ಹಾನಿಯಾಗಿದೆ.










