ಸೈನಿಕರ ವಾಹನದ ಮೇಲೆ ನಕ್ಸಲರಿಂದ ಐಇಡಿ ಸ್ಫೋಟ.

29

ಬಿಜಾಪುರ: ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯಲ್ಲಿ ಸೈನಿಕರ ವಾಹನವನ್ನು ಗುರಿಯಾಗಿಸಿಕೊಂಡು ನಕ್ಸಲರು ಮಾಡಿದ ಐಇಡಿ ಸ್ಫೋಟದಿಂದ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ. ಈ ದಾರುಣ ಘಟನೆಯಲ್ಲಿ ಎಂಟು ಜನ ಭದ್ರತಾ ಸಿಬ್ಬಂದಿ ಹಾಗೂ ಒಬ್ಬ ಚಾಲಕ ಸೇರಿ 9 ಜನ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯ ಬೇದ್ರೆ-ಕುತ್ರು ರಸ್ತೆಯಲ್ಲಿ ಜಿಲ್ಲಾ ಮೀಸಲು ಗಾರ್ಡ್ ಸಿಬ್ಬಂದಿಯಿದ್ದ ವಾಹನವನ್ನು ನಕ್ಸಲರು ಐಇಡಿಯಿಂದ ಸ್ಫೋಟಿಸಲಾಗಿದೆ. 1 ದಿನದ ಹಿಂದೆಯಷ್ಟೇ ಛತ್ತಿಸ್‍ಗಢದ ಬಸ್ತಾರ್ ಪ್ರದೇಶದಲ್ಲಿ ಭದ್ರತಾ ಪಡೆ ಹಾಗೂ ಮಾವೋವಾದಿಗಳ ನಡುವೆ ನಡೆದ ಎನ್‍ಕೌಂಟರ್‍ನಲ್ಲಿ 4 ಮಂದಿ ಮಾವೋವಾದಿಗಳು ಮೃತಪಟ್ಟಿದ್ದರು. ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ದಕ್ಷಿಣ ಅಬುಜ್‍ಮಾದ್‍ನ ಕಾಡಿನಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಗುಂಡಿನ ದಾಳಿಗೆ ನಾಲ್ವರು ಮಾವೋವಾದಿಗಳು ಬಲಿಯಾಗಿದ್ದಾರೆ. ಅಲ್ಲದೇ ಜಿಲ್ಲಾ ಮೀಸಲು ಗಾರ್ಡ್‍ನ ಹೆಡ್ ಕಾನ್ಸ್‍ಟೇಬಲ್ ಸನ್ನು ಕರಮ್ ತೀವ್ರಗಾಯಗೊಂಡು ಮೃತಪಟ್ಟಿದ್ದರು. ಈ ಘಟನೆ ನಡೆದ ಸ್ಥಳದಲ್ಲಿ ಬೃಹತ್ ಹೊಂಡ ಉಂಟಾಗಿದೆ. ಇದು ಯೋಧರನ್ನು ಕೊಂದ ಐಇಡಿ ಸ್ಫೋಟದ ತೀವ್ರತೆಯನ್ನು ಸೂಚಿಸುತ್ತದೆ. ಬಸ್ತಾರ್‍ನ ಬಿಜೆಪಿ ಸಂಸದ ಮಹೇಶ್ ಕಶ್ಯಪ್ ದಾಳಿಯನ್ನು ಹೇಡಿತನ ಎಂದು ಹೇಳಿದ್ದಾರೆ. ನಮ್ಮ ಯೋಧರು ಮಾವೋವಾದಿಗಳನ್ನು ನಿರ್ಮೂಲನೆ ಮಾಡುತ್ತಿದ್ದಾರೆ. ಆದ್ದರಿಂದ ನಕ್ಸಲರು ಹತಾಶೆಯಿಂದ ಈ ದುರದೃಷ್ಟಕರ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. 2026ರ ವೇಳೆಗೆ ಬಸ್ತಾರ್ ಅನ್ನು ಮಾವೋವಾದಿಗಳಿಂದ ತೆರವುಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಾವು ಸೈನಿಕರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.