
ರಾಯಚೂರು: ಮತ್ತೋರ್ವ ಬಾಣಂತಿ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸರಸ್ವತಿ ಮೃತ ಬಾಣಂತಿ. ಜಿಲ್ಲೆಯಲ್ಲಿ ಮೂರು ತಿಂಗಳಲ್ಲಿ ಸಾವನ್ನಪ್ಪಿದ ಬಾಣಂತಿಯರ ಸಂಖ್ಯೆ 12ಕ್ಕೆ ಹೆಚ್ಚಳವಾಗಿದೆ. ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿಯರ ಸಂಖ್ಯೆ 5ಕ್ಕೆ ಹೆಚ್ಚಳವಾಗಿದೆ. ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಬಾಣಂತಿ ಸರಸ್ವತಿ ಜನವರಿ 2ರಂದು ರಿಮ್ಸ್ ಆಸ್ಪತ್ರೆಗೆ ದಾಖಲೆಯಾಗಿದ್ದರು. ಸರಸ್ವತಿ ಅವರಿಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು. ಹೆರಿಗೆ ನಂತರ ಅಧಿಕ ರಕ್ತದೊತ್ತದ, ಇನ್ಫೆಕ್ಷನ್, ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲಿದ ಸರಸ್ವತಿ ಜ.5ರಂದು ಕೊನೆಯುಸಿರು ಎಳೆದಿದ್ದಾರೆ. ಸರಸ್ವತಿ ನಾಲ್ಕನೇ ಮಗುವಿಗೆ ಜನ್ಮನೀಡಿದ್ದರು. ಮಗುವಿಗೆ ವೆಂಟಿಲೇಟರ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಸ ವರ್ಷದ ದಿನವೇ ಮಸೀದಾಪುರ ಗ್ರಾಮದ ಶಿವಲಿಂಗಮ್ಮ ಗಂಡು ಮಗುವಿಗೆ ಜನ್ಮ ನೀಡಿದ ನಂತರ ಮಗು ಸಮೇತ ತಾಯಿಯೂ ರಿಮ್ಸ್ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದರು. ಈಕೆಯ ಪೋಷಕರು ಡಿಸ್ಚಾರ್ಜ್ ಮಾಡಿ ಬೇರೆಡೆ ಕರೆದೊಯ್ಯುತ್ತೇವೆ ಎಂದು ಕೇಳಿದರು ರಿಮ್ಸ್ ಆಸ್ಪತ್ರೆ ವೈದ್ಯರು ಡಿಸ್ಚಾರ್ಜ್ ಮಾಡಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಇದೇ ಕಾರಣಕ್ಕೆ ಆಕೆಯ ಸಾವಾಗಿತ್ತು. ಆಕೆಯ ಸಾವಿಗೆ ರಿಮ್ಸ್ ಆಸ್ಪತ್ರೆ ವೈದ್ಯರೇ ಕಾರಣ ಎಂದು ಶಿವಲಿಂಗಮ್ಮ ಕುಟುಂಬಸ್ಥರು ಆರೋಪ ಮಾಡಿದ್ದರು.









