ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಮುಖ್ಯವಾಹಿನಿಗೆ 6 ನಕ್ಸಲರು ಶರಣಾಗತಿ.

31

ಬೆಂಗಳೂರು: ಸಮಾಜದ ಮುಖ್ಯ ವಾಹಿನಿಗೆ ಬರಲು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಆರು ನಕ್ಸಲರ ಶರಣಾಗತಿಯಲ್ಲಿ ದಿಢೀರ್ ಬದಲಾವಣೆ ಆಗಿದ್ದು, ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಮುಂದೆ ಮಂಗಳವಾರ ಶರಣಾಗತಿಯಾಗಲಿದ್ದಾರೆಂದು ತಿಳಿದುಬಂದಿದೆ. 6 ಜನ ನಕ್ಸಲರು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಅವರ ಮುಂದೆ ಶರಣಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಮುಂಡಗಾರು ಲತಾ, ತಮಿಳುನಾಡಿನ ಕೆ ವಸಂತ್, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಕೇರಳದ ಜೀಶಾ ಮತ್ತು ಕರ್ನಾಟಕದ ಮರೆಪ್ಪ ಅರೋಲಿ ಶರಣಾಗತಿಯಾಗಲಿದ್ದಾರೆಂದು ವರದಿಗಳು ತಿಳಿಸಿವೆ. ಈ ಬಗ್ಗೆ ಗೃಹ ಸಚಿವರಾದ ಪರಮೇಶ್ವರ್ ಅವರು ಮಾಹಿತಿ ನೀಡಿದ್ದು, ನಕ್ಸಲರು ಶರಣಾಗುತ್ತಿದ್ದಾರೆ ಎಂಬುದನ್ನು ಮಾತ್ರ ಹೇಳಬಲ್ಲೆ. ಶರಣಾಗುತ್ತಿರುವವರ ಬೇಡಿಕೆ ಹಾಗೂ ಇತರೆ ಮಾಹಿತಿಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಬಿಜೆಪಿ ವಿರೋಧ ಬಗ್ಗೆ ಪ್ರತಿಕ್ರಿಯಿಸಿ, ವಿಕ್ರಂಗೌಡ ಸಾವು ಆದಾಗ, ಶರಣಾಗುವಂತೆ ನಕ್ಸಲರಿಗೆ ಕರೆ ಕೊಡಲಾಗಿತ್ತು. ಜೀವನದಲ್ಲಿ ಯಾಕೆ ಈ ದಾರಿ ಹಿಡಿದಿದ್ದೀರಿ. ಸಮಾಜದ ಮುನ್ನೆಲೆಗೆ ಬನ್ನಿ ಎಂದು ಆಹ್ವಾನ ನೀಡಿದ್ದೆ. ಅದೇ ರೀತಿಯಾಗಿ ಎಎನ್‍ಎಫ್ ಹಿರಿಯ ಅಧಿಕಾರಿಗಳು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕರೆ ಕೊಟ್ಟಿದ್ದರು. ಅನೇಕ ಪ್ರಸ್ತುತ ಶರಣಾಗುತ್ತಿರುವ ನಕ್ಸಲರ ವಿರುದ್ಧ ಅನೇಕ ಪ್ರಕರಣಗಳಿರುವುದು ನಿಜ. ಶರಣಾದ ಬಳಿಕ ಯಾವ ರೀತಿ ಚರ್ಚೆ ಮಾಡಬೇಕು, ಕಾನೂನಿನಲ್ಲಿ ಏನು ಅವಕಾಶವಿದೆ ಎಂಬುದನ್ನು ನೋಡುತ್ತೇವೆ ಎಂದು ತಿಳಿಸಿದರು.