ಇಂದಿನಿಂದ ಮಹಾಕುಂಭ ಮೇಳ ಆರಂಭ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಪ್ರಯಾಗ್‍ರಾಜ್.

28

ಪ್ರಯಾಗ್‍ರಾಜ್: ಮಹಾಕುಂಭ ಮೇಳವು ಇಂದಿನಿಂದ ಪ್ರಯಾಗರಾಜ್‍ನಲ್ಲಿ ಪ್ರಾರಂಭವಾಗಿದ್ದು, ಫೆ.26ರ ಮಹಾ ಶಿವರಾತ್ರಿವರೆಗೂ ಮಹಾಕುಂಭ ಮೇಳ ನಡೆಯಲಿದೆ. 144 ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳ ಮಹಾ ಕುಂಭಮೇಳಕ್ಕೆ ಪ್ರಯಾಗ್‍ರಾಜ್‍ನಲ್ಲಿ ಶುರುವಾಗಿದೆ. ಲಕ್ಷಾಂತರ ನಾಗ ಸಾಧುಗಳು ಶಾಹಿ ಸ್ನಾನ ಮಾಡುವ ಮೂಲಕ ಮಹಾಕುಂಭ ಮೇಳಕ್ಕೆ ವಿದ್ಯುಕ್ತ ಚಾಲನೆ ನೀಡಲಾಗಿದೆ. ಈ ಮಹಾಕುಂಭ ಜಾತ್ರೆಯಲ್ಲಿ ಪುಣ್ಯನದಿಯಲ್ಲಿ ಸ್ನಾನ ಮಾಡಲು ದೂರದೂರುಗಳಿಂದ ಭಕ್ತರು ಆಗಮಿಸುತ್ತಾರೆ. ಈ ಸಮಯದಲ್ಲಿ, ಅಮೃತ ಸ್ನಾನಕ್ಕೆ ವಿಶೇಷ ಮಹತ್ವವಿದೆ, ಇದರಲ್ಲಿ ಮೊದಲು ಋಷಿಗಳು ಮತ್ತು ಸಂತರು ಹಾಗೂ ನಂತರ ಸಾಮಾನ್ಯ ಜನರು ಸ್ನಾನ ಮಾಡುತ್ತಾರೆ.40 ಕೋಟಿಗೂ ಹೆಚ್ಚಿನ ಜನರು ಭಾಗಿಯಾಗುವ ನಿರೀಕ್ಷೆಯಿದೆ. ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯ ಸ್ನಾನ ನಡೆಯಲಿದ್ದು, ಉತ್ತರ ಪ್ರದೇಶ ಸರ್ಕಾರದಿಂದ ಸಂಪೂರ್ಣ ತಯಾರಿ ನಡೆದಿದೆ. ಇಲ್ಲಿಯವರೆಗೆ, 40 ಲಕ್ಷಕ್ಕೂ ಅಧಿಕ ಜನರು ನದಿಯಲ್ಲಿ ಸ್ನಾನ ಮಾಡಿದ್ದಾರೆ ಎಂದು ಮಹಾ ಕುಂಭಮೇಳದ ಅಧಿಕಾರಿ ವಿಜಯ್ ಕಿರಣ್ ಆನಂದ್ ಅವರು ತಿಳಿಸಿದ್ದಾರೆ. ಶನಿವಾರ ಸಂಗಮದಲ್ಲಿ ಸ್ನಾನ ಮಾಡಲು 33 ಲಕ್ಷ ಭಕ್ತರು ಭೇಟಿ ನೀಡಿದ್ದರು. ಕಳೆದ 2 ದಿನಗಳಲ್ಲಿ 85 ಲಕ್ಷಕ್ಕೂ ಅಧಿಕ ಜನರು ನದಿಯಲ್ಲಿ ಸ್ನಾನ ಮಾಡಿದ್ದಾರೆಂದು ವರದಿ ನೀಡಿದ್ದಾರೆ. ಮಹಾಕುಂಭ ಸ್ನಾನವು ಎಲ್ಲಾ ರೀತಿಯ ತೊಂದರೆಗಳನ್ನು ತೊಡೆದುಹಾಕುತ್ತದೆ ಮತ್ತು ಪಾಪಗಳಿಂದ ಮುಕ್ತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ. ಹರಿದ್ವಾರ, ಪ್ರಯಾಗರಾಜ್, ಉಜ್ಜಯಿನಿ ಮತ್ತು ನಾಸಿಕ್‍ಗಳಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಮಹಾ ಕುಂಭಮೇಳವನ್ನು ಆಯೋಜಿಸಲಾಗುತ್ತದೆ ಮತ್ತು ಇವುಗಳಲ್ಲಿ, ಪ್ರಯಾಗರಾಜ್‍ನಲ್ಲಿ ನಡೆಯುವ ಮಹಾ ಕುಂಭವು ಅತ್ಯಂತ ಭವ್ಯವಾಗಿದೆ.