ಬೆಂಗಳೂರು: ರಾಜ್ಯದಲ್ಲಿ ಗೋಹಿಂಸೆ ಹಾಗೂ ಗೋಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಚಾಮರಾಜಪೇಟೆ ಹಸು ಕೆಚ್ಚಲು ಕತ್ತರಿಸಿದ ಘಟನೆ ಬೆನ್ನಲ್ಲೇ ಹೊನ್ನಾವರದಲ್ಲಿ ಹಸು ಕೊಂದಿರುವ ಘಟನೆ ವರದಿಯಾಗಿದ್ದು, ಎಲ್ಲೆಡೆ ತೀವ್ರ ವಿರೋಧ ಹಾಗೂ ಆಕ್ರೋಶ ವ್ಯಕ್ತವಾಗುತ್ತಿವೆ. ಈ ಬಗ್ಗೆ ಮಾಧ್ಯಮಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಗೋಹಿಂಸೆ ಹಾಗೂ ಗೋಹತ್ಯೆ ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಈ ಘಟನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಪೊಲೀಸರಿಗೆ ಮತ್ತೊಮೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಈ ರೀತಿಯ ಮನಸ್ಥಿತಿ ಇರುವವರನ್ನು ಮೊದಲು ಗುರುತಿಸಬೇಕು. ಕೃತ್ಯದ ಹಿಂದೆ ಬೇರೆ ಯಾರಾದ್ದಾದರೂ ಪ್ರಚೋದನೆ ಇದೆಯೇ. ಅಥವಾ ವೈಯಕ್ತಿಕವಾಗಿ ಕೃತ್ಯ ಎಸಗುತ್ತಿದ್ದಾರೆಯೇ ಅಥವಾ ಸಂಘಟನೆಗಳಿವೆಯೇ ಎಂಬೆಲ್ಲಾ ವಿಚಾರಗಳನ್ನು ತನಿಖೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.










