ಬೆಂಗಳೂರು: ಕೇಂದ್ರ ಸರ್ಕಾರದ ಹಿಂದಿನ ಬಜೆಟ್‍ನಲ್ಲಿ ರಾಜ್ಯಕ್ಕೆ ಘೋಷಿಸಿರುವ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯ ಮಾಡಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. ಶನಿವಾರ ಮಂಡನೆ ಆಗಲಿರುವ ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ರಾಜ್ಯದ ಬೇಡಿಕೆ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ನಮ್ಮ ಬೇಡಿಕೆಗಳನ್ನು ಲಿಖಿತವಾಗಿ ಮತ್ತು ಮನವಿ ರೂಪದಲ್ಲಿ ಸಲ್ಲಿಸಿದ್ದೇವೆ. ಈ ಹಿಂದಿನ ವರ್ಷಗಳಲ್ಲಿ ಕೇಂದ್ರ, ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡಿದೆ. ಆದರೂ ಜನರ ಪರವಾಗಿ ನಮ್ಮ ಹಕ್ಕು ಪ್ರತಿಪಾದನೆ ಮಾಡುವ ಕೆಲಸ ಮಾಡಿದ್ದೇವೆ. ನಮಗೆ ಹೊಸ ಅನುದಾನ ಕೊಡದೇ ಹೋದರೂ ಹಿಂದಿನ ವರ್ಷಗಳಲ್ಲಿ ಘೋಷಣೆ ಮಾಡಿರುವ ಅನುದಾನ ಕೊಟ್ಟರೆ ಸಾಕಾಗಿದೆ ಎಂದು ಹೇಳಿದರು. ರಾಜ್ಯಕ್ಕೆ ಹಿಂದಿನ ಹಣಕಾಸು ಆಯೋಗ 11,495 ಸಾವಿರ ಕೋಟಿ ರೂಪಾಯಿ ವಿಶೇಷ ಅನುದಾನ ಕೊಡಲು ಶಿಫಾರಸು ಮಾಡಿತ್ತು. ಅದನ್ನ ಕೊಡಲಿಲ್ಲ. ಈ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯ ಮಾಡಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ್ದ ಐದು ಸಾವಿರ ಕೋಟಿ ರೂಪಾಯಿ ಹಣ ಕೊಡಬೇಕು. ಮೇಕೆದಾಟು ಯೋಜನೆ, ಕಳಸಾ ಬಂಡೂರಿ ಯೋಜನೆಗೆ ಅನುಮತಿ ಕೊಡಬೇಕು. ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗ, ಮಲೆನಾಡು ಕರ್ನಾಟಕ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಕೊಡಬೇಕು. ಪಿಂಚಣಿ ಯೋಜನೆಗೆ ಕೇಂದ್ರ ಕೊಡುವ ಮೊತ್ತವನ್ನು ಏರಿಕೆ ಮಾಡಲು ಮನವಿ ಮಾಡ್ತಿದ್ದೇವೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ, ಬಿಸಿಯೂಟ ಮಾಡುವವರಿಗೆ ಕೇಂದ್ರದ ಗೌರವ ಧನ ಏರಿಕೆ ಮಾಡಬೇಕು. ಪ್ರಧಾನಿಮಂತ್ರಿ ಆವಾಸ್ ಯೋಜನಡಿ ಮನೆ ಕಟ್ಟಿಕೊಡಲು ಕೇಂದ್ರ ಕೊಡುವ ಹಣವನ್ನು ಏರಿಕೆ ಮಾಡಬೇಕು ಎಂದು ಒತ್ತಾಯ ಮಾಡಿದ್ದೇವೆ ಎಂದು ತಿಳಿಸಿದರು.










