ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಸ್ಥಾನಮಾನ ಸಿಕ್ಕಿಲ್ಲವೆಂದು ಅಸಮಾಧಾನಗೊಂಡಿದ್ದ ಹಿರಿಯ ಶಾಸಕರಿಗೆ ಸಚಿವ ಸ್ಥಾನಮಾನದ ಕೆಲ ಹುದ್ದೆಗಳನ್ನು ನೀಡಲಾಗಿತ್ತು. ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು, ಇದರ ಜತೆಗೆ ಶಾಸಕ ಬಿಆರ್ ಪಾಟೀಲ್ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಇದೀಗ ಏಕಾಏಕಿ ಬಿ.ಆರ್ ಪಾಟೀಲ್ ಅವರು ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್‍ನಲ್ಲಿ ಸಂಚಲನ ಮೂಡಿಸಿದೆ. ಸಿಎಂ ರಾಜಕೀಯ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ಪಾಟೀಲ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ರವಾನಿಸಿದ್ದಾರೆ. ಬಿಆರ್ ಪಾಟೀಲ್ ಅವರ ದಿಡೀರ್ ನಿರ್ಧಾರ ಆಶ್ಚರ್ಯಕ್ಕೆ ಕಾರಣವಾಗಿದೆ. ಈ ಹಿಂದೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಆಳಂದ ಕಾಂಗ್ರೆಸ್ ಶಾಸಕ ಮತ್ತೆ ಸ್ವಪಕ್ಷ ಮತ್ತು ಸರ್ಕಾರ ಆಡಳಿತ ವಿರುದ್ಧ ಸಿಡಿದೆದ್ದಿದ್ದರು. ಸಿಎಂ ಗೆ ಪತ್ರ ಬರೆದು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು. ಶಾಸಕ ಬಿ.ಆರ್ ಪಾಟೀಲ್ ಅವರು ಬಹಿರಂಗವಾಗಿಯೇ ಸಚಿವ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ವಿರುದ್ಧ ಸಿಡಿದೆದ್ದಿದ್ದರು. ಅಲ್ಲದೇ ಈ ಸಂಬಂಧ ನೇರ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಅದರಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾಗಿ ತಿಳಿಸಿದ್ದರು.










