ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ದೊಡ್ಡ ಗೆಲುವನ್ನು ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದಾರೆ. ಅಭಿವೃದ್ಧಿ ಮತ್ತು ಉತ್ತಮ ಆಡಳಿತ ಗೆದ್ದಿದೆ ಎಂದು ಬಣ್ಣಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಬಿಜೆಪಿಗೆ ಐತಿಹಾಸಿಕ ಜಯ ನೀಡಿದ್ದಕ್ಕಾಗಿ ದೆಹಲಿಯ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಅಭಿನಂದನೆಗಳು. ನಿಮ್ಮೆಲ್ಲರಿಗೂ ನನ್ನ ಹೃದಯಾಂತರಾಳದಿಂದ ಕೃತಜ್ಞತೆ. ದೆಹಲಿಯ ಸರ್ವತೋಮುಖ ಅಭಿವೃದ್ಧಿ, ಜನರ ಜೀವನವನ್ನು ಉತ್ತಮಗೊಳಿಸಲು ಸಿಗುವ ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ ಎಂದು ಖಾತರಿಪಡಿಸುತ್ತೇವೆ ಎಂದು ತಿಳಿಸಿದ್ದಾರೆ. ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ದೆಹಲಿ ಪ್ರಮುಖ ಪಾತ್ರ ವಹಿಸುತ್ತದೆ. ಪಕ್ಷಕ್ಕೆ ಇಷ್ಟು ದೊಡ್ಡದ ಮಟ್ಟದ ಜನಾದೇಶ ಬರುವಲ್ಲಿ ಹಗಲಿರುಳು ಶ್ರಮಿಸಿದ ಪಕ್ಷದ ನನ್ನ ಎಲ್ಲಾ ಕಾರ್ಯಕರ್ತರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಈಗ ನಾವು ದೆಹಲಿಯ ಜನರಿಗೆ ಸೇವೆ ಸಲ್ಲಿಸಲು ಇನ್ನಷ್ಟು ಶ್ರಮವಹಿಸಿ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.










