ಮುಸ್ಲಿಂ ಮತಾಂಧರ ವಿರುದ್ಧದ ಪ್ರಕರಣ ವಾಪಸ್‍ನಿಂದ ಪೊಲೀಸರ ಮೇಲೆ ಹಲ್ಲೆ ಮಾಡುವ ಧೈರ್ಯ: ಆರ್.ಅಶೋಕ್ ಆಕ್ರೋಶ.

33

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಂ ಮತಾಂಧರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯುವುದರಿಂದ ಪೊಲೀಸರ ಮೇಲೂ ಹಲ್ಲೆ ಮಾಡುವಷ್ಟು ಧೈರ್ಯ ಮತಾಂಧರಿಗೆ ಬಂದಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟು ಹಳ್ಳ ಹಿಡಿದಿದೆ. ಹುಬ್ಬಳ್ಳಿಯಲ್ಲಿ ಆದಂತೆಯೇ ಮೈಸೂರಿನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಿದೆ. ರಾಹುಲ್ ಗಾಂಧಿ, ಕೇಜ್ರಿವಾಲ್ ಬಗ್ಗೆ ಪೋಸ್ಟ್ ಮಾಡಿದ್ದಾರೆಂಬ ಕಾರಣಕ್ಕೆ ಮತಾಂಧ ಮುಸ್ಲಿಮರು ಫೆಬ್ರವರಿ 10ರ ಸಂಜೆ 6 ರಿಂದ 7 ಗಂಟೆ ಸಮಯದಲ್ಲಿ ಚೀಲಗಳಲ್ಲಿ ಕಲ್ಲು ತುಂಬಿಕೊಂಡು ಬಂದು ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಹಿಂದೂ ಸಮುದಾಯದ ಜನರಿಗೆ ಬೆದರಿಕೆ ಹಾಕಿದ್ದು, ಇಡೀ ಮೈಸೂರಿನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದಿದ್ದಾರೆ. ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾದವರ ವಿರುದ್ಧ ಇದ್ದ ಪ್ರಕರಣಗಳನ್ನು ಸಿಎಂ ಸಿದ್ದರಾಮಯ್ಯ ವಾಪಸ್ ಪಡೆದಿರುವುದರಿಂದ ಮುಸ್ಲಿಂ ಮತಾಂಧರಿಗೆ ಧೈರ್ಯ ಬಂದಿದೆ. ಜೊತೆಗೆ ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು, ಇದು ಮುಸ್ಲಿಮರ ಸರ್ಕಾರ ಎಂದು ಹೇಳಿರುವುದರಿಂದ ಪೊಲೀಸ್ ಠಾಣೆಯನ್ನು ಧ್ವಂಸ ಮಾಡಬಹುದು ಎಂಬ ವಿಶ್ವಾಸ ಅವರಿಗೆ ಬಂದಿದೆ. ಒಂದೆಡೆ ಆರ್ಥಿಕ ದುಸ್ಥಿತಿ ಇದ್ದರೆ, ಮತ್ತೊಂದೆಡೆ ಕಾನೂನು ಹದಗೆಟ್ಟಿದೆ. ಈಗ ಮುಸ್ಲಿಮರ ವಿರುದ್ಧ ಪ್ರಕರಣ ದಾಖಲಿಸಿದರೂ, ಅದು ವ್ಯರ್ಥ ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಪೊಲೀಸರ ಬಗ್ಗೆ ಭಯವೇ ಇಲ್ಲವೆಂದರೆ ಕಾನೂನು ಸತ್ತಿದೆ ಎಂದರ್ಥ. ಮತಬ್ಯಾಂಕ್‍ಗಾಗಿ ಇಡೀ ವ್ಯವಸ್ಥೆಯನ್ನು ಹಾಳು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.