ಮುಂಬೈ ದಾಳಿ ಅಪರಾಧಿ ತಹಾವ್ವುರ್ ರಾಣಾ ಹಸ್ತಾಂತರಕ್ಕೆ ಡೊನಾಲ್ಡ್ ಟ್ರಂಪ್ ಅನುಮೋದನೆ.

39

2008ರ ಮುಂಬೈ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಶಿಕ್ಷೆಗೊಳಗಾಗಿರುವ ತಹಾವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಮುಂದಾಗಿದ್ದು, ಪ್ರಧಾನಿ ಮೋದಿ ಸಮ್ಮುಖದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಘೋಷಣೆ ಮಾಡಿದ್ದಾರೆ. ಕಳೆದ ತಿಂಗಳು, ಅಮೆರಿಕದ ಸುಪ್ರೀಂ ಕೋರ್ಟ್ ತಹಾವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮೋದನೆ ನೀಡಿತ್ತು. ಪ್ರಕರಣದಲ್ಲಿ ಅವರ ಶಿಕ್ಷೆಯ ವಿರುದ್ಧ ಅವರು ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹಾವ್ವುರ್ ರಾಣಾ ಅವರು 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಲ್ಪಟ್ಟರು ಮತ್ತು ಶಿಕ್ಷೆಗೊಳಗಾಗಿದ್ದಾರೆ. ಭಾರತವು ಅಮೆರಿಕದ ಏಜೆನ್ಸಿಯೊಂದಿಗೆ ವಿವರಗಳನ್ನು ಹಂಚಿಕೊಂಡಿತ್ತು, ಅದನ್ನು ಕೆಳ ನ್ಯಾಯಾಲಯಗಳು ಮತ್ತು ಸುಪ್ರೀಂ ಕೋರ್ಟ್‍ನ ಮುಂದೆ ಇಡಲಾಯಿತು. ಭಾರತದ ಈ ಸಾಕ್ಷ್ಯವನ್ನು ನ್ಯಾಯಾಲಯ ಸ್ವೀಕರಿಸಿತು. ಭಾರತ ನೀಡಿದ ದಾಖಲೆಯಲ್ಲಿ 26/11 ದಾಳಿಯಲ್ಲಿ ತಹಾವ್ವುರ್ ಪಾತ್ರವನ್ನು ಉಲ್ಲೇಖಿಸಲಾಗಿದೆ. 2008ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ತಹಾವ್ವುರ್ ರಾಣಾ ಬೇಕಾಗಿದ್ದರಿಂದ ಭಾರತ ಅವನನ್ನು ಹಸ್ತಾಂತರಿಸುವಂತೆ ಕೋರಿತ್ತು. ಇದಕ್ಕೂ ಮೊದಲು, ಅವರು ಸ್ಯಾನ್ ಫ್ರಾನ್ಸಿಸ್ಕೋದ ಉತ್ತರ ಸಕ್ರ್ಯೂಟ್‍ಗಾಗಿ ಯುಎಸ್ ಕೋರ್ಟ್ ಆಫ್ ಅಪೀಲ್ಸ್ ಸೇರಿದಂತೆ ಹಲವಾರು ಫೆಡರಲ್ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟಗಳನ್ನು ಸೋತಿದ್ದರು.