ದಲಿತ ಸಿಎಂ ಪ್ರಸ್ತಾಪ ಅನಾವಶ್ಯಕ: ಸಚಿವ ಕೆ.ಎನ್ ರಾಜಣ್ಣ.

43

ತುಮಕೂರು: ರಾಜ್ಯದಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು, ಯಾರು ಉಪಮುಖ್ಯಮಂತ್ರಿಯಾಗಬೇಕು ಮತ್ತು ಕೆಪಿಸಿಸಿ ಅಧ್ಯಕ್ಷರಾಗಬೇಕು ಎಂಬ ಕುರಿತು 2023ರ ಮೇ 18ರಂದು ಎಐಸಿಸಿ ಹೊರಡಿಸಿರುವ ನೋಟಿಫಿಕೇಶನ್‍ನಲ್ಲಿ ಪ್ರಸ್ತಾಪಿಸಲಾಗಿದೆ. ಇದನ್ನು ಸ್ಪಷ್ಟಪಡಿಸಬೇಕೆಂದು ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ತಿಳಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಮುಖಂಡರ ಬಳಿ ದೆಹಲಿಯಲ್ಲಿ ಇದನ್ನು ಪ್ರಸ್ತಾಪಿಸಿದ್ದೇನೆ. ಅವರ ಪ್ರತಿಕ್ರಿಯೆಗಾಗಿ ನಾನು ಕಾಯುತ್ತಿದ್ದೇನೆ ಎಂದು ತಿಳಿಸಿದರು. ಅಹಿಂದ ಸಮಾವೇಶಕ್ಕೆ ಕುರಿತಂತೆ ಈಗಾಗಲೇ ಯಾವುದೇ ಸ್ಥಳವನ್ನು ಅಂತಿಮಗೊಳಿಸಿಲ್ಲ. ಅದರಲ್ಲಿ ಚಿತ್ರದುರ್ಗ ದಾವಣಗೆರೆ ಸೇರಿದಂತೆ 3 ಜಿಲ್ಲೆಗಳಲ್ಲಿ ಯಾವುದಾದರೂ ಒಂದು ಜಿಲ್ಲೆಯನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ. ಹೀಗಾಗಿ ದಲಿತ ಸಿಎಂ ಕುರಿತ ಪ್ರಸ್ತಾಪ ಅನಾವಶ್ಯಕವಾಗಿದೆ. ದೆಹಲಿಯಲ್ಲಿ ಹೈಕಮಾಂಡ್ ಜೊತೆ ಅನೇಕ ವಿಷಯಗಳನ್ನು ಪ್ರಸ್ತಾಪ ಮಾಡಿದ್ದೇನೆ. ಅದರಲ್ಲಿ ವಿಧಾನ ಪರಿಷತ್‍ಗೆ ನಾಮಕರಣ ಸದಸ್ಯರ ನೇಮಕದಲ್ಲಿ ಇದುವರೆಗೂ ಅಧಿಕಾರ ವಂಚಿತ ಸಣ್ಣ ಜಾತಿಗಳನ್ನು ಪರಿಗಣಿಸಬೇಕೆಂದು ಸೇರಿದಂತೆ ಪಕ್ಷದ ಸಂಘಟನೆ ದೃಷ್ಟಿಯಿಂದ ಅಗತ್ಯವಿರುವ ಕ್ರಮಗಳ ಬಗ್ಗೆ ಮಾತನಾಡಿದ್ದೇನೆ ಎಂದು ಹೇಳಿದರು. ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಈಗಿನ 5 ವರ್ಷ ಸೇರಿದಂತೆ ಮುಂದಿನ ಹತ್ತು ವರ್ಷದವರೆಗೂ ಕೂಡ ಮುಖ್ಯಮಂತ್ರಿ ಆಗಿ ಮುಂದುವರೆಯಲಿದ್ದಾರೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.